ಕೊರೋನ ಪರೀಕ್ಷೆ ವೇಳೆ ಗಲಾಟೆ ಪ್ರಕರಣ: ಪತ್ರಕರ್ತರ ವಿರುದ್ಧ ಎಂಎಲ್ಸಿ ಶ್ರೀಕಂಠೇಗೌಡ ಪುತ್ರ ದೂರು

ಎಂಎಲ್ಸಿ ಶ್ರೀಕಂಠೇಗೌಡ
ಮಂಡ್ಯ, ಎ.30: ನಗರದ ಅಂಬೇಡ್ಕರ್ ಭವನದಲ್ಲಿ ಪತ್ರಕರ್ತರಿಗೆ ಕೋವಿಡ್-19 ಪರೀಕ್ಷೆ ನಡೆಸುತ್ತಿದ್ದ ವೇಳೆ ಸಂಭವಿಸಿದ ಗಲಾಟೆ ಪ್ರಕರಣಕ್ಕೆ ಸಂಬಂಧ ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರ ಪುತ್ರನಿಂದ ಪತ್ರಕರ್ತರ ವಿರುದ್ಧ ದೂರು ದಾಖಲಾಗಿದೆ.
ಖಾಸಗಿ ವಾಹಿನಿ ವರದಿಗಾರರಾದ ಕೆ.ಎನ್.ನಾಗೇಗೌಡ, ಸುನಿಲ್ ಕುಮಾರ್, ಕ್ಯಾಮರಾಮನ್ಗಳಾದ ಮದನ್ ಹಾಗೂ ಮಹೇಶ್ ವಿರುದ್ಧ ಶ್ರೀಕಂಠೇಗೌಡ ಅವರ ಪುತ್ರ ಕೃಷಿಕ್ಗೌಡ ಪಶ್ಚಿಮ ಠಾಣೆಗೆ ದೂರು ನೀಡಿದ್ದಾರೆ.
ಜನವಸತಿ ಪ್ರದೇಶದಲ್ಲಿ ಕೋವಿಡ್ ಪರೀಕ್ಷೆ ನಡೆಸುವುದಕ್ಕೆ ತನ್ನ ತಂದೆ ಶ್ರೀಕಂಠೇಗೌಡ, ತಾನು ಮತ್ತು ಬಡಾವಣೆಯ ಇತರರು ಆಕ್ಷೇಪ ವ್ಯಕ್ತಪಡಿಸಿದ ವೇಳೆ ಪತ್ರಕರ್ತರು ತನಗೆ ಹಲ್ಲೆ ಮಾಡಿದ್ದಾರೆಂದು ಕೃಷಿಕ್ಗೌಡ ದೂರಿನಲ್ಲಿ ಆರೋಪಿಸಿದ್ದಾರೆ.
ಎ.25ರಂದು ಪತ್ರಕರ್ತರಿಗೆ ಕೊರೋನ ಪರೀಕ್ಷೆ ನಡೆಸುವ ವೇಳೆ ಆಕ್ಷೇಪ ವ್ಯಕ್ತಪಡಿಸಿದ ಸಂಬಂಧ ಪತ್ರಕರ್ತರು ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಪುತ್ರ ಕೃಷಿಕ್ಗೌಡ, ಇತರರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.
ಈಗ ಪತ್ರಕರ್ತರ ವಿರುದ್ಧ ಪ್ರತಿದೂರು ನೀಡಿದ್ದು, ಪಶ್ಚಿಮ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.





