ಎನ್.ಭೃಂಗೀಶ್ ಸೇವೆಯಿಂದ ನಿವೃತ್ತಿ
ಬೆಂಗಳೂರು, ಎ.30: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಂಟಿ ನಿರ್ದೇಶಕ ಎನ್.ಭೃಂಗೀಶ್ ಅವರು ಎ.30ರಂದು ವಯೋ ನಿವೃತ್ತಿ ಹೊಂದಿದರು.
ಸರಕಾರಿ ಸೇವೆಗಳ ಮುಂಚಿತವಾಗಿ ದಿನಪತ್ರಿಕೆಯೊಂದರ ವರದಿಗಾರರಾಗಿದ್ದ ಅವರು 1990ರಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಆಯ್ಕೆಯಾಗಿದ್ದರು.
ತಮ್ಮ ಸರಕಾರಿ ವೃತ್ತಿಯನ್ನು ತುಮಕೂರು ಜಿಲ್ಲೆಯ ಮಧುಗಿರಿ ಉಪ ವಿಭಾಗೀಯ ಕಚೇರಿಯಲ್ಲಿ ಆರಂಭಿಸಿದ್ದರು. ಪ್ರಸ್ತುತ ಅವರು ಸಿಎಂ ಮಾಧ್ಯಮ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ವಯೋ ನಿವೃತ್ತಿ ಹೊಂದಿದ್ದಾರೆ.
ಕನ್ನಡ ಮತ್ತು ಇಂಗ್ಲೀಷ್ ಭಾಷೆಯ ಮೇಲಿನ ಹಿಡಿತ ಅವರನ್ನು ಬಹುಬೇಗನೆ ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಗೆ ತಂದು ಕೂಡಿಸಿತ್ತು. ತಮ್ಮ ಸುದೀರ್ಘ 30 ವರ್ಷಗಳ ಸೇವಾ ಅವಧಿಯಲ್ಲಿ 25ಕ್ಕೂ ಹೆಚ್ಚಿನ ವರ್ಷಗಳನ್ನು ಮುಖ್ಯಮಂತ್ರಿಗಳ ಕಚೇರಿಯಲ್ಲಿ ಮಾಧ್ಯಮ ಮುಖ್ಯಸ್ಥರಾಗಿ ಕರ್ನಾಟಕ ಕಂಡ 10 ಮುಖ್ಯಮಂತ್ರಿಗಳ ಜೊತೆ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಅವರದ್ದಾಗಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಬೀಳ್ಕೊಡೆಗೆಯ ಸರಳ ಕಾರ್ಯಕ್ರಮದಲ್ಲಿ ಅವರ ಪ್ರತಿಭೆಯನ್ನು ಹಿರಿ-ಕಿರಿಯ ಅಧಿಕಾರಿಗಳು ಕೊಂಡಾಡಿದರು. ಈ ಸಮಯದಲ್ಲಿ ಇಲಾಖೆಯ ಉನ್ನತ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.







