ಕೊರೋನ ವೈರಸ್ : ದ.ಕ.ಜಿಲ್ಲೆ ಮತ್ತೆ ಆರೆಂಜ್ ಝೋನ್‌ಗೆ

ಮಂಗಳೂರು, ಮೇ 1: ಕೊರೋನ ವೈರಸ್ ಸೋಂಕು ಪ್ರಕರಣಗಳನ್ನು ಆಧರಿಸಿ ದ.ಕ. ಜಿಲ್ಲೆಯನ್ನು ಮತ್ತೆ ಆರೇಂಜ್ ಝೋನ್ ಆಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಅಧಿಕೃತವಾಗಿ ಪ್ರಕಟಿಸಿದೆ.
ರಾಜ್ಯ ಆರೋಗ್ಯ ಇಲಾಖೆಯ ಹೊಸ ಮಾನದಂಡಗಳೊಂದಿಗೆ ಜಿಲ್ಲಾವಾರು ಕೆಂಪು, ಕಿತ್ತಳೆ ಹಾಗೂ ಹಸಿರು ವಲಯವನ್ನು ಪಟ್ಟಿ ಮಾಡಿದ್ದು, ರಾಜ್ಯದ 15 ಜಿಲ್ಲೆಗಳನ್ನು ಕೆಂಪು ವಲಯಗಳನ್ನಾಗಿ ಘೋಷಿಸಲಾಗಿತ್ತು. ಅದರಲ್ಲಿ ದ.ಕ. ಜಿಲ್ಲೆಯೂ ಸೇರಿತ್ತು.
ಈ ಹಿಂದೆ ಆರೆಂಜ್ ಝೋನ್‌ನಲ್ಲಿದ್ದ ದ.ಕ. ಜಿಲ್ಲೆಯನ್ನು ರೆಡ್ ಝೋನ್‌ನಲ್ಲಿ ಸೇರಿಸಲಾಗಿದ್ದರೂ ಕೂಡ ಗುರುವಾರ ಬಿಡುಗಡೆ ಮಾಡಲಾದ ಪಟ್ಟಿಯಲ್ಲಿ ಮತ್ತೆ ಆರೆಂಜ್ ಝೋನ್ ನಲ್ಲಿ ಗುರುತಿಸಲಾಗಿದೆ.
ಕೊರೋನ ವೈರಸ್ ಸೋಂಕು ಪ್ರಕರಣಗಳನ್ನು ಆಧರಿಸಿ ಈ ವಲಯಗಳನ್ನು ಗುರುತಿಸಲಾಗುತ್ತದೆ. ಗುರುವಾರ ಕೊರೋನ ಸೋಂಕಿನಿಂದ ಒಬ್ಬ ಮಹಿಳೆಯ ಮೃತ್ಯು ಮತ್ತು ಇನ್ನೊಬ್ಬ ಮಹಿಳೆಯಲ್ಲಿ ಪಾಸಿಟಿವ್ ಕಂಡು ಬಂದರೂ ಕೂಡ ಒಟ್ಟು ಜಿಲ್ಲೆಯ ವರದಿ ಆಧರಿಸಿ ಈ ಪಟ್ಟಿ ತಯಾರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಜಿಲ್ಲೆಯಲ್ಲಿ 22 ಪ್ರಕರಣ ಕಂಡು ಬಂದರೂ ಕೂಡ ಅದರಲ್ಲಿ 16 ಮಾತ್ರ ದ.ಕ.ಜಿಲ್ಲೆಯದ್ದಾಗಿದೆ. ಉಳಿದಂತೆ 4 ಕೇರಳ, 1 ಉಡುಪಿ ಮತ್ತು 1 ಭಟ್ಕಳದ ವ್ಯಕ್ತಿಗೆ ಸೋಂಕು ತಗುಲಿತ್ತು. ಈ ಆರು ವ್ಯಕ್ತಿಗಳಿಗೆ ಮಂಗಳೂರು ನಂಟು ಇದ್ದ ಕಾರಣ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿತ್ತು. ಇದೀಗ ಹೊರ ರಾಜ್ಯ ಮತ್ತು ಹೊರ ಜಿಲ್ಲೆಯ 6 ಪ್ರಕರಣವನ್ನು ಪ್ರತ್ಯೇಕಿಸಲಾಗಿದೆ.







