ಸಬ್ಸಿಡಿರಹಿತ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಗಮನಾರ್ಹ ಇಳಿಕೆ

ಹೊಸದಿಲ್ಲಿ,ಮೇ1: ದೇಶದ ಪ್ರಮುಖ ತೈಲ ಮಾರುಕಟ್ಟೆ ಕಂಪೆನಿಗಳು(ಒಎಂಸಿ) ಇಂದು ಸಬ್ಸಿಡಿರಹಿತ ಎಲ್ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಗಮನಾರ್ಹವಾಗಿ ಕಡಿತಗೊಳಿಸಿದೆ.
ಭಾರತೀಯ ತೈಲ ನಿಗಮದ(ಐಒಸಿಎಲ್)ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ, ದಿಲ್ಲಿಯಲ್ಲಿ 14.2 ಕೆಜಿ ಸಿಲಿಂಡರ್ ಬೆಲೆ ಈಗ 581.50 ರೂ. ಆಗಿದ್ದು,162.50ರೂ.ಕಡಿತಗೊಳಿಸಲಾಗಿದೆ. ಎಪ್ರಿಲ್‌ನಲ್ಲಿ 744 ರೂ. ಇತ್ತು.
ಅದೇ ರೀತಿ,ಕೋಲ್ಕತಾದಲ್ಲಿ 14.2 ಕೆಜಿಯ ಇಂಡೇನ್ ಸಿಲಿಂಡರ್ ಬೆಲೆ 190 ರೂ. ಕಡಿತಗೊಳಿಸಲಾಗಿದ್ದು, 584.50 ರೂ.ಗೆ ಸಿಗಲಿದೆ. ಮುಂಬೈನಲ್ಲಿ 135.50 ರೂ.ಕಡಿತವಾಗಿದ್ದು, 579 ರೂ. ಸಿಲಿಂಡರ್ ಲಭ್ಯವಿದೆ. ಚೆನ್ನೈನಲ್ಲಿ ಸಿಲಿಂಡರ್ ಬೆಲೆ 192 ರೂ. ಕಡಿಮೆಯಾಗಿದ್ದು, 569.50 ರೂ.ಗೆ ಲಭ್ಯವಿರಲಿದೆ.
ಇದೀಗ ಸತತ ಮೂರನೇ ಬಾರಿ ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್‌ಗಳ ಬೆಲೆ ಕಡಿತಗೊಳಿಸಲಾಗಿದೆ. ಸಾಮಾನ್ಯವಾಗಿ ತೈಲ ಮಾರುಕಟ್ಟೆ ಕಂಪೆನಿಗಳು ಪ್ರತಿ ತಿಂಗಳು ಸಿಲಿಂಡರ್ ದರವನ್ನು ಪರಿಷ್ಕೃರಿಸುತ್ತವೆ. 2020ರ ಎಪ್ರಿಲ್ 1ರಂದು ದರ ಪರಿಷ್ಕರಿಸಲಾಗಿತ್ತು.