ದ.ಕ. ಜಿಲ್ಲೆಯಲ್ಲಿ ಮತ್ತೆ ಎರಡು ಕೊರೋನ ಸೋಂಕು ದೃಢ
► ಬೋಳೂರಿನ ಮಹಿಳೆಯ ಪತಿಗೂ ಪಾಸಿಟಿವ್ ► ಮಂಗಳೂರು ಮನಪಾ ವ್ಯಾಪ್ತಿಯಲ್ಲಿ ನಾಲ್ಕನೇ ಪ್ರಕರಣ

ಮಂಗಳೂರು, ಮೇ 1: ದ.ಕ. ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ ಎರಡು ಸೋಂಕು ದೃಢಗೊಂಡಿವೆ. ಇದರೊಂದಿಗೆ ಮಂಗಳೂರು ಮನಪಾ ವ್ಯಾಪ್ತಿ ಯಲ್ಲಿ 4 ಮತ್ತು ದ.ಕ.ಜಿಲ್ಲೆಯ ನಿವಾಸಿಗಳಲ್ಲಿ 18 ಹಾಗೂ ದ.ಕ. ಜಿಲ್ಲೆಯಲ್ಲಿ 24ನೆ ಪ್ರಕರಣ ಪತ್ತೆಯಾದಂತಾಗಿದೆ. ಶುಕ್ರವಾರ ದೃಢಗೊಂಡ ಇಬ್ಬರು ಸೋಂಕಿತರು ಕೂಡ ಪುರುಷರಾಗಿದ್ದಾರೆ.
ಗುರುವಾರವಷ್ಟೇ ದೃಢಗೊಂಡ ನಗರದ ಬೋಳೂರು ಹಿಂದೂ ರುದ್ರಭೂಮಿ ಸಮೀಪದ 58ರ ಹರೆಯದ ಮಹಿಳೆಯ 62 ವರ್ಷ ಪ್ರಾಯದ ಪತಿಗೆ ಶುಕ್ರವಾರ ಕೊರೋನ ಸೋಂಕು ಇರುವುದು ದೃಢಪಟ್ಟಿದೆ. ಅದಲ್ಲದೆ ಬಂಟ್ವಾಳ ತಾಲೂಕಿನ ಕಸಬಾ ಗ್ರಾಮದ 69 ವರ್ಷ ಪ್ರಾಯದ ವ್ಯಕ್ತಿಗೂ ಕೂಡ ಸೋಂಕು ಇರುವುದು ಶುಕ್ರವಾರ ಸಂಜೆ ಬಿಡುಗಡೆಯಾದ ರಾಜ್ಯ ಬುಲೆಟಿನ್‌ನಲ್ಲಿ ತಿಳಿಸಲಾಗಿದೆ.
ಬೋಳೂರಿನ 58ರ ಹರೆಯದ ಮಹಿಳೆಯು ಇತ್ತೀಚೆಗೆ ಕೊರೋನ ಸೋಂಕಿನಿಂದ ಹಾಟ್‌ಸ್ಪಾಟ್ ಆಗಿ ಗುರುತಿಸಿಕೊಂಡಿರುವ ಪಡೀಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅಲ್ಲಿಂದ ಗುಣಮುಖರಾಗಿ ವಾರದ ಹಿಂದೆ ತನ್ನ ಮನೆಗೆ ತೆರಳಿದ್ದ ಈ ಮಹಿಳೆಗೆ ಮಂಗಳವಾರ ಜ್ವರದ ಲಕ್ಷಣ ಕಂಡು ಬಂದಿತ್ತು. ತಕ್ಷಣ ಅವರನ್ನು ಕೋವಿಡ್ ಆಸ್ಪತ್ರೆಯಾದ ವೆನ್ಲಾಕ್‌ಗೆ ದಾಖಲಿಸಲಾಗಿತ್ತು. ಗುರುವಾರ ಬಂದ ವರದಿಯಲ್ಲಿ ಅವರಿಗೆ ಕೊರೋನ ಪಾಸಿಟಿವ್ ಇರುವುದು ದೃಢಪಟ್ಟಿದೆ. ಇದೀಗ ಅವರ ಸಂಪರ್ಕದಲ್ಲಿದ್ದ ಪತಿಗೂ ಕೊರೋನ ಪಾಸಿಟಿವ್ ಆಗಿದೆ.
ಎ. 19ರಂದು ಮೃತಪಟ್ಟ ಬಂಟ್ವಾಳ ಪೇಟೆಯ 50 ವರ್ಷ ಪ್ರಾಯದ ಮಹಿಳೆಯ ನೆರೆ ಮನೆಯ 69 ವರ್ಷ ಪ್ರಾಯದ ವ್ಯಕ್ತಿಗೂ ಕೊರೋನ ಸೋಂಕು ಪಾಸಿಟಿವ್ ಆಗಿದೆ.







