ಮಂಡ್ಯ: ಮುಂಬೈಯಿಂದ ಬಂದ ನಾಲ್ವರು ಸೇರಿ ಒಟ್ಟು 8 ಮಂದಿಗೆ ಕೊರೋನ ಪಾಸಿಟಿವ್

ಮಂಡ್ಯ, ಎ.1: ಮುಂಬೈನಿಂದ ಆಗಮಿಸಿದ್ದ ನಾಲ್ವರು ಸೇರಿದಂತೆ ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನದಲ್ಲಿ ಹೊಸ 8 ಕೊರೋನ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 26ಕ್ಕೆ ಏರಿದೆ.
ಮುಂಬೈನಿಂದ ಬಂದ ನಾಲ್ವರಿಗೆ ಹಾಗೂ ಮಳವಳ್ಳಿಯ ನಾಲ್ಕು ಮಂದಿಯಲ್ಲಿ ಕೊರೋನ ಸೋಂಕು ಇರುವುದು ದೃಢಪಟ್ಟಿದೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಪಾಂಡವಪುರ ತಾಲೂಕು, ಮೇಲುಕೋಟೆ ಹೋಬಳಿ, ಎಚ್.ಕೋಡಗಹಳ್ಳಿ ಗ್ರಾಮದ ಮುಂಬೈನಲ್ಲಿ ವಾಸವಿದ್ದ ನಾಲ್ಕು ಮಂದಿಯಲ್ಲಿ ಕೊರೋನ ಇದೆ ಎಂದರು.
ಎ.23 ರಂದು ಮುಂಬೈನಲ್ಲಿ ವಾಸವಿದ್ದ ಕೋಡಗಹಳ್ಳಿಯ ಸುಮಾರು 53 ವಯಸ್ಸಿನ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿದ್ದು, ಅವರ ಮೃತದೇಹದ ಜೊತೆಯಲ್ಲಿ ಕೋಡಗಹಳ್ಳಿಗೆ ಆಗಮಿಸಿದ್ದ ಕುಟುಂಬದವರಿಗೆ ಕೊರೋನ ವೈರಸ್ ಬಂದಿದೆ ಎಂದು ಅವರು ಹೇಳಿದರು. ಹೃದಯಾಘಾತದಿಂದ ಸಾವನ್ನಪ್ಪಿದ ವ್ಯಕ್ತಿಯ ಇಬ್ಬರು ಪುತ್ರಿಯರು, ಮಗ, ಸುಮಾರು ಎರಡೂವರೆ ವರ್ಷದ ಮೊಮ್ಮಗನಿಗೆ ವೈರಸ್ ಇದೆ ಎಂದು ಅವರು ವಿವರಿಸಿದರು.
ಮುಂಬೈ ನಗರಪಾಲಿಕೆ ವೈದ್ಯರ ವರದಿ ಪ್ರಕಾರ ಮುಂಬೈನಲ್ಲಿ ಸಾವನ್ನಪ್ಪಿದ ವ್ಯಕ್ತಿಗೆ ಕೊರೋನ ಇರಲಿಲ್ಲ. ವರದಿಯಲ್ಲಿ ಹೃದಯಾಘಾತವೆಂದು ಹೇಳಲಾಗಿದೆ. ಈ ಬಗ್ಗೆ ಅಲ್ಲಿಂದ ಮಾಹಿತಿ ಪಡೆಯಲಾಗುವುದು ಎಂದು ಅವರು ತಿಳಿಸಿದರು. ಮೃತ ವ್ಯಕ್ತಿಯ ಮಗ ಮುಂಬೈನ ಐಸಿಐಸಿಐ ಬ್ಯಾಂಕ್‍ನಲ್ಲಿ ಕೆಲಸ ಮಾಡುತ್ತಿದ್ದು, ಆತನಿಂದ ಕುಟುಂಬದ ಇತರರಿಗೆ ವೈರಸ್ ಹರಡಿರುವ ಸಾಧ್ಯತೆ ಇದೆ. ಏಕೆಂದರೆ, ಮೃತ ವ್ಯಕ್ತಿಯ ಪತ್ನಿಗೆ ಸೋಂಕು ತಗುಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಕಾನೂನು ಪ್ರಕಾರವೇ ಮುಂಬೈನಿಂದ ಅಂಬ್ಯುಲೆನ್ಸ್ ನಲ್ಲಿ ಸ್ವಂತ ಗ್ರಾಮಕ್ಕೆ ಶವ ತರಲಾಗಿದೆ. ಶವ ಸಂಸ್ಕಾರ ಸಂದರ್ಭ ಕುಟುಂಬದ ಏಳು ಜನರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಕೂಡಲೇ ಅವರನ್ನು ಕ್ವಾರಂಟೈನ್ ಇಡಲಾಗಿತ್ತು. ಈಗ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ ಎಂದು ಅವರು ಹೇಳಿದರು.
ಶುಕ್ರವಾರ ಸೋಂಕು ದೃಢಪಟ್ಟ ಎಂಟು ಮಂದಿಯನ್ನೂ ಮಂಡ್ಯ ವೈದ್ಯಕೀಯ ವಿಜ್ಞಾನಗಳ(ಮಿಮ್ಸ್) ಆಸ್ಪತ್ರೆಯ ಐಸೋಲೇಷನ್ ವಾರ್ಡ್‍ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲಾಗಿದೆ. ಜಿಲ್ಲೆಯಲ್ಲಿ ಕೊರೋನ ವೈರಸ್ ಹರಡುವುದನ್ನು ನಿಯಂತ್ರಿಸಲು ಜಿಲ್ಲಾಡಳಿತ ಎಲ್ಲಾ ಕ್ರಮ ಕೈಗೊಂಡಿದ್ದು, ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.







