ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿರುವ ವಲಸಿಗರನ್ನು ವಾಪಸ್ ಕರೆತರಲು ಕೇಂದ್ರದಿಂದ ಸಿದ್ಧತೆ
ನವದೆಹಲಿ: ಕೊರೋನವೈರಸ್ ಹಾವಳಿಯಿಂದಾಗಿ ಗಲ್ಫ್ ರಾಷ್ಟ್ರಗಳಲ್ಲಿ ಅತಂತ್ರರಾಗಿರುವ ಭಾರತೀಯರನ್ನು ಮರಳಿ ಸ್ವದೇಶಕ್ಕೆ ವಾಪಸ್ ಕರೆತರುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳುವುದರಲ್ಲಿ ಕೇಂದ್ರ ಸರಕಾರ ವ್ಯಸ್ತವಾಗಿದ್ದು, ಇದಕ್ಕಾಗಿ ಕಮರ್ಷಿಯಲ್ ವಿಮಾನಗಳ ಹೊರತಾಗಿ ಅತ್ಯಂತ ದೊಡ್ಡ ಯುದ್ಧನೌಕೆಗಳು ಹಾಗೂ ರಕ್ಷಣಾ ಪಡೆಗಳ ವಿಮಾನಗಳನ್ನೂ ಬಳಸುವ ಸಾಧ್ಯತೆಗಳಿವೆ ಎಂದು ಮೂಲಗಳನ್ನಾಧರಿಸಿ hindustantimes.com ವರದಿ ಮಾಡಿದೆ.
ಆರಂಭದಲ್ಲಿ 34 ಲಕ್ಷ ಭಾರತೀಯರು ವಾಸಿಸುತ್ತಿರುವ ಸಂಯುಕ್ತ ಅರಬ್ ಸಂಸ್ಥಾನದಿಂದ ಜನರನ್ನು ವಾಪಸ್ ಕರೆತಂದು ನಂತರ ಸೌದಿ ಅರೇಬಿಯಾ, ಕುವೈತ್ ನಲ್ಲಿ ಅತಂತ್ರರಾಗಿರುವ ಭಾರತೀಯರನ್ನು ವಾಪಸ್ ಕರೆತರಲಾಗುವುದು.
ಕೇರಳದಲ್ಲಿ ಕ್ವಾರಂಟೀನ್ ಕೇಂದ್ರಗಳಲ್ಲಿ ಹಾಗೂ ಆಸ್ಪತ್ರೆಗಳಲ್ಲಿ 2 ಲಕ್ಷ ಜನರಿಗೆ ಸೌಕರ್ಯಗಳನ್ನು ಕಲ್ಪಿಸಿರುವುದರಿಂದ ಸ್ವದೇಶಕ್ಕೆ ಆಗಮಿಸುವವರ ಪೈಕಿ ಕೇರಳ ಮೂಲದವರು ಮೊದಲಿಗರಾಗಲಿದ್ದಾರೆ.
ಹೀಗೆ ಗಲ್ಫ್ ರಾಷ್ಟ್ರಗಳಲ್ಲಿ ಅತಂತ್ರರಾಗಿರುವ ಭಾರತೀಯರನ್ನು ವಾಪಸ್ ಕರೆತರುವ ಪ್ರಕ್ರಿಯೆಯ ಏರ್ಪಾಟುಗಳನ್ನು ಶುಕ್ರವಾರ ವಿದೇಶಾಂಗ ಕಾರ್ಯದರ್ಶಿ ಹರ್ಷ್ ವರ್ಧನ್ ಶ್ರಿಂಗ್ಲಾ ರಾಜಧಾನಿಯಲ್ಲಿರುವ ಸಚಿವಾಲಯದ ಕಾರ್ಯಾಲಯದಲ್ಲಿ ನಡೆಸಿದ್ದಾರೆ. ಇಂತಹ ಒಂದು ದೊಡ್ಡ ಮಟ್ಟದ ಪ್ರಕ್ರಿಯೆ ಇದೇ ಮೊದಲ ಬಾರಿಗೆ ನಡೆಯಲಿದೆ.
1990ರ ಗಲ್ಫ್ ಯುದ್ಧದ ಸಂದರ್ಭ 1.7 ಲಕ್ಷ ಭಾರತೀಯರನ್ನು ಕುವೈತ್ ನಿಂದ ವಿಮಾನಗಳ ಮೂಲಕ ವಾಪಸ್ ಕರೆತಂದಿರುವುದು ಇಲ್ಲಿಯ ತನಕದ ದಾಖಲೆಯ ಕಾರ್ಯಾಚರಣೆಯಾಗಿತ್ತು. ಆ ಸಂದರ್ಭ ಸುಮಾರು ಎರಡು ತಿಂಗಳುಗಳ ಕಾಲ ಭಾರತ 500ಕ್ಕೂ ಅಧಿಕ ಏರ್ ಇಂಡಿಯಾ ವಿಮಾನಗಳ ಹಾರಾಟ ನಡೆಸಿತ್ತು.
ಈ ಬಾರಿ ಮೊದಲ ಹಂತದಲ್ಲಿಯೇ 1.9 ಲಕ್ಷ ಮಂದಿಯನ್ನು ವಾಪಸ್ ಕರೆತರುವ ಉದ್ದೇಶ ಸರಕಾರಕ್ಕಿದೆಯೆನ್ನಲಾಗಿದೆ. ಪ್ರಧಾನಿ ನರೇಂದ್ರ ಮೋದಿಯ ನಿರ್ದೇಶನದಂತೆ ಆರಂಭದಲ್ಲಿ ಭಾರತಕ್ಕೆ ವಾಪಸಾಗುವವರಲ್ಲಿ ಉನ್ನತ ಉದ್ಯೋಗ ಹೊಂದಿರುವವರು ಪ್ರಥಮ ಆದ್ಯತೆ ಪಡೆಯಲಿದ್ದಾರೆ. ಇವರ ಜತೆಗೆ ಆರೋಗ್ಯ ಸಮಸ್ಯೆಯಿರುವವರು. ಕುಟುಂಬದಲ್ಲಿ ಯಾರನ್ನಾದರೂ ಕಳೆದುಕೊಂಡವರು ಹಾಗೂ ಮತ್ತಿತರ ಮಾನವೀಯ ಕಾರಣಗಳಿಗಾಗಿ ಕೆಲವರನ್ನು ಮೊದಲ ಹಂತದಲ್ಲಿಯೇ ಕರೆತರಲಾಗುವುದು ಎಂದು ವರದಿ ತಿಳಿಸಿದೆ.
ಆದರೆ ಯಾವಾಗ ಈ ಕಾರ್ಯಾಚರಣೆ ಆರಂಭವಾಗಬಹುದೆಂಬ ಕುರಿತಂತೆ ಸರಕಾರ ತೀರ್ಮಾನ ಕೈಗೊಂಡಿಲ್ಲವಾದರೂ ಸದ್ಯದಲ್ಲಿಯೇ ಕಾರ್ಯಾಚರಣೆ ನಡೆಯಬಹುದು ಎಂದು ಮೂಲಗಳು ತಿಳಿಸಿವೆ.
ಭಾರತೀಯ ವಾಯು ಪಡೆಯು ತನ್ನ ಅತ್ಯಂತ ದೊಡ್ಡ ವಿಮಾನಗಳಾದ ಸಿ-17, ಗ್ಲೋಬ್ ಮಾಸ್ಟರ್ ಹಾಗೂ ಸಿ-130ಜೆ ಇವುಗಳನ್ನು ಬಳಸಲಿದೆ. ಮೊದಲ ಎರಡು ವಿಮಾನಗಳನ್ನು 2015ರಲ್ಲಿ ಯೆಮೆನ್‍ನಿಂದ ಭಾರತೀಯರನ್ನು ವಾಪಸ್ ಕರೆತರಲು ಬಳಸಲಾಗಿತ್ತು.