ಹಸಿರು ವಲಯಗಳಲ್ಲಿ ಸೋಂಕು ಹರಡಲು ಸರಕಾರ, ಜಿಲ್ಲಾಡಳಿತಗಳೇ ಕಾರಣ: ಕುಮಾರಸ್ವಾಮಿ ಆರೋಪ

ಬೆಂಗಳೂರು, ಮೇ.1: ಹಸಿರು ವಲಯಗಳಲ್ಲಿಯೂ ಕೊರೋನ ವೈರಸ್ ಸೋಂಕು ಹರಡಲು ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತಗಳ ನಿರ್ಲಕ್ಷವೇ ಕಾರಣ ಎಂದು ಗಂಭೀರ ಆರೋಪ ಮಾಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಂಡ್ಯ ಜಿಲ್ಲೆಗೆ ಕೊರೋನ ಸೋಂಕು ತಂದಿದ್ದು, ಇದರ ಹಿಂದೆ ರಾಜಕೀಯ ಅಡಗಿದೆ ಎಂದು ತಿಳಿಸಿದ್ದಾರೆ.
ಶುಕ್ರವಾರ ದೇವನಹಳ್ಳಿ ಬಳಿ ಮಾತನಾಡಿದ ಅವರು, ಮುಂಬೈನಿಂದ ಮಂಡ್ಯಕ್ಕೆ ತಂದಿದ್ದ ಮೃತ ವ್ಯಕ್ತಿಯಿಂದ ಪಾರ್ಥಿವ ಶರೀರದೊಂದಿಗೆ ಬಂದಿದ್ದ 4 ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದೆ. ಮಂಡ್ಯ ಜಿಲ್ಲೆಯ 15ರಿಂದ 16 ಸಾವಿರರದಷ್ಟು ಮಂದಿ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದು, ಆ ಪೈಕಿ ಈಗಾಗಲೇ 7ರಿಂದ 8 ಸಾವಿರ ಮಂದಿ ಮಂಡ್ಯಕ್ಕೆ ಬಂದಿದ್ದು, ಅವರನ್ನು ಸರಿಯಾದ ರೀತಿಯಲ್ಲಿ ಕ್ವಾರಂಟೈನ್ ಮಾಡಿಲ್ಲ. ಹೀಗಾಗಿ ಜಿಲ್ಲೆಯ ಜನತೆ ಆತಂಕದಲ್ಲಿದ್ದಾರೆ ಎಂದರು.
ಮಂಡ್ಯ ಜಿಲ್ಲೆಯ ಪಾಂಡವಪುರದ ಐದು ಮಂದಿಗೆ ಸೋಂಕು ದೃಢಪಟ್ಟಿದ್ದು, ಮುಂಬೈನಿಂದ ನಕಲಿ ದಾಖಲೆ ಸೃಷ್ಟಿಸಿ ಮೃತದೇಹವನ್ನು ಇಲ್ಲಿಗೆ ತರಲಾಗಿದೆ. ಮೃತ ವ್ಯಕ್ತಿ ಕೊರೋನ ಸೋಂಕಿನಿಂದ ಸಾವನಪ್ಪಿದ್ದಾರೋ ಇಲ್ಲವೋ ಎಂಬುದು ಗೊತ್ತಿಲ್ಲ. ಇದರಲ್ಲಿ ಜಿಲ್ಲಾಡಳಿತದ ನಿರ್ಲಕ್ಷ್ಯ ಅಡಗಿದೆ. ಇಂತಹ ಅಧಿಕಾರಿಗಳ ವಿರುದ್ಧ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.
ಜನರ ಶ್ರಮ ವ್ಯರ್ಥ ಆಗದಿರಲಿ: ಲಾಕ್‍ಡೌನ್ ಸಡಿಲಿಕೆ ಮಾಡುವ ಮೂಲಕ ವಾಣಿಜ್ಯ ಚಟುವಟಿಕೆಗಳಿಗೆ ಸರಕಾರ ಅವಕಾಶ ನೀಡುತ್ತಿದೆ. ಆದರೆ, ಸುಮಾರು ನಲವತ್ತೈದು ದಿನಗಳ ಕಾಲ ಬಡಕೂಲಿ ಕಾರ್ಮಿಕರು ಶ್ರಮವಹಿಸಿ, ಸಂಕಷ್ಟದಲ್ಲಿಯೂ ಸರಕಾರಕ್ಕೆ ಬೆಂಬಲ ನೀಡಿದ್ದು, ಅದು ಯಾವುದೇ ಕಾರಣಕ್ಕೂ ವ್ಯರ್ಥ ಆಗದಿರಲಿ. ಆ ನಿಟ್ಟಿನಲ್ಲಿ ಸರಕಾರ ಸೂಕ್ತ ಮುನ್ನಚ್ಚರಿಕೆ ವಹಿಸಬೇಕು ಎಂದು ಕುಮಾರಸ್ವಾಮಿ ಸಲಹೆ ನೀಡಿದರು.
ಕೇಂದ್ರ ಸರಕಾರ ಶ್ರೀಮಂತರ ಪರ: ಕೇಂದ್ರ ಸರಕಾರ ಇರುವುದೇ ಶ್ರೀಮಂತರ ಪರ. ಹೀಗಾಗಿಯೆ ಮಲ್ಯ, ಅಂಬಾನಿ, ಬಾಬಾ ರಾಮ್‍ದೇವ್ ಸೇರಿದಂತೆ ಹಲವು ಮಂದಿಯ ಸಾಲಮನ್ನಾ ಮಾಡಿದೆ. ಅಲ್ಲದೆ, ಅವರ ಸಾಲಮನ್ನಾ ಮಾಡಲಾಗಿಲ್ಲ, ಬದಲಿಗೆ ಸಾಲ ಮೂಂದೂಡಲಾಗಿದೆ ಎಂದು ಹೇಳುತ್ತಿದೆ. ಅದೇ ರೀತಿಯಲ್ಲಿ ರೈತರ ಸಾಲವನ್ನು ಮುಂದೂಡಿ. ರೈತರು ಆರ್ಥಿಕವಾಗಿ ಸದೃಢರಾದಾಗ ಸಾಲ ಮರುಪಾವತಿ ಮಾಡುತ್ತಾರೆಂದು ಕುಮಾರಸ್ವಾಮಿ ಆಗ್ರಹಿಸಿದರು.
ಉಳ್ಳವರ 68 ಸಾವಿರ ಕೋಟಿ ರೂ.ಸಾಲಮನ್ನಾ ಮಾಡಲಾಗಿದೆ. 50 ಸಾವಿರ ಕೋಟಿ ರೂ.ಮ್ಯುಚುವೆಲ್ ಫಂಡ್ ಯಾರಿಗೆ ಹೋಗುತ್ತಿದೆ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಕೇಂದ್ರ ಸರಕಾರ 400 ರಿಂದ 500 ಕಿ.ಮೀ. ಕಾಲ್ನಾಡಿಗೆಯಲ್ಲಿ ನಡೆದುಕೊಂಡ ಹೋಗುತ್ತಿರುವ ಕಾರ್ಮಿಕರ ಬಗ್ಗೆ ಎಂದೂ ಒಂದು ಮಾತು ಆಡಲಿಲ್ಲ ಎಂದು ಟೀಕಿಸಿದರು.







