ಮಂಗಳೂರು: ಇಬ್ಬರು ಬಾಲಕಿಯರ ಅಪಹರಣ ಪ್ರಕರಣ; ಆರೋಪಿಗಳು ಸೆರೆ

ಮಂಗಳೂರು, ಮೇ 1: ಇಬ್ಬರು ಬಾಲಕಿಯರನ್ನು ಅಪಹರಿಸಿ, ಬಜ್ಪೆ ಸಮೀಪದ ಅದ್ಯಪಾಡಿ ಬಳಿ ಅವಿತುಕೊಂಡಿದ್ದ ಇಬ್ಬರು ಆರೋಪಿಗಳನ್ನು ಪಣಂಬೂರು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಮೂಲತಃ ಉತ್ತರ ಕರ್ನಾಟಕದ ಪ್ರಸ್ತುತ ತೋಕೂರಿನಲ್ಲಿ ವಾಸಿಸುತ್ತಿರುವ ಹನುಮಂತ್ (23) ಮತ್ತು ಮಾದೇಶ್ (22) ಬಂಧಿತ ಆರೋಪಿಗಳು. ಇವರು ಉತ್ತರ ಕರ್ನಾಟಕದ ಇಬ್ಬರು ಬಾಲಕಿಯರನ್ನು ಅಪಹರಿಸಿದ್ದರು ಎನ್ನಲಾಗಿದೆ. ಬಾಲಕಿಯರಲ್ಲಿ ಒಬ್ಬಳು ಶಾಲೆಗೆ ಹೋಗುತ್ತಿದ್ದರೆ ಇನ್ನೊಬ್ಬಳು ಮನೆಯಲ್ಲಿಯೇ ಇದ್ದಳು. ಇವರು ಪ್ರೀತಿಸುತ್ತಿರುವ ವಿಷಯ ಮನೆಯವರಿಗೆ ಗೊತ್ತಾಗಿ ವಿರೋಧಿಸಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಆರೋಪಿಗಳು ಬಾಲಕಿಯರನ್ನು ಮದುವೆ ಮಾಡಿಕೊಡಲು ಒತ್ತಾಯಿಸಿದ್ದು ಅದಕ್ಕೆ ಮನೆಯವರು ಒಪ್ಪದಿದ್ದಾಗ ಎ.28ರಂದು 4 ಮಂದಿ ತೋಕೂರಿನಿಂದ ಏಕಾಏಕಿ ಪರಾರಿಯಾಗಿದ್ದರು. ಬಾಲಕಿಯರು ಅಪ್ರಾಪ್ತರಾದ ಕಾರಣ ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಯುವಕರ ವಿರುದ್ಧ ಅಪಹರಣ ದೂರು ದಾಖಲಾಗಿತ್ತು.
ನಾಪತ್ತೆಯಾದ ನಾಲ್ಕು ಮಂದಿ ಕೂಡಾ ಅದ್ಯಪಾಡಿಯ ಗುಡ್ಡಗಾಡು ಪ್ರದೇಶದ ಕೋರೆಯಲ್ಲಿ ವಾಸವಾಗಿದ್ದರು. ಇಬ್ಬರು ಯುವಕರಲ್ಲಿ ಒಬ್ಬ ಮೇಸ್ತ್ರಿ ಮತ್ತು ಇನ್ನೊಬ್ಬ ಕೂಲಿ ಕೆಲಸ ಮಾಡುತ್ತಿದ್ದ. ನಾಲ್ಕು ಮಂದಿ ಗುಡ್ಡಗಾಡು ಪ್ರದೇಶದಲ್ಲಿದ್ದುದನ್ನು ಗಮನಿಸಿದ ಅದ್ಯಪಾಡಿ ಗ್ರಾಮಸ್ಥರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಪಣಂಬೂರು ಪೊಲೀಸರು ಸ್ಥಳಕ್ಕೆ ತೆರಳಿ ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.





