ಕೊರೋನ ಸೋಂಕಿತ ವ್ಯಕ್ತಿ ಆಸ್ಪತ್ರೆಯಿಂದ ಬಿಡುಗಡೆ: ಕೋವಿಡ್-19 ಮುಕ್ತವಾದ ಉತ್ತರ ಕನ್ನಡ ಜಿಲ್ಲೆ

ಸಾಂದರ್ಭಿಕ ಚಿತ್ರ
ಕಾರವಾರ, ಮೇ.1: ಉತ್ತರ ಕನ್ನಡ ಜಿಲ್ಲೆಯ ನೌಕಾನೆಲೆಯ ಪತಂಜಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಟ್ಕಳ ಮೂಲದ ಕೊನೆಯ ಕೋವಿಡ್-19 ಸೋಂಕಿತ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾನೆ. ಇದರಿಂದ ಜಿಲ್ಲೆಯ ಎಲ್ಲ ಕೊರೋನ ಸೋಂಕಿತರು ಗುಣಮುಖರಾದಂತಾಗಿದ್ದು, ಜಿಲ್ಲೆ ಈಗ ಕೊರೋನ ಮುಕ್ತವಾಗಿದೆ.
ಈ ಬಗ್ಗೆ ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಮಾಹಿತಿ ನೀಡಿದ್ದು, ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಕಂಡು ಬಂದಿದ್ದ 11 ಮಂದಿಯಲ್ಲಿ 10 ಜನ ಈಗಾಗಲೇ ಗುಣಮುಖರಾಗಿ ಬಿಡುಗಡೆ ಹೊಂದಿದ್ದರು. ಇದೀಗ ನೌಕಾನೆಲೆಯ ಪತಂಜಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಡೆಯ ಸೋಂಕಿತನೂ ಗುಣಮುಖನಾಗಿದ್ದು, ಬಿಡುಗಡೆ ಮಾಡಲಾಗಿದೆ. ಅವರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಭಟ್ಕಳದ ಕ್ವಾರಂಟೈನ್ನಲ್ಲಿ ಕೆಲವು ದಿನಗಳ ಕಾಲ ಇಡಲಾಗುತ್ತಿದೆ.
ಭಟ್ಕಳದ ಒಟ್ಟು 11 ಮಂದಿ ಇದುವರೆಗೆ ಸೋಂಕಿಗೆ ತುತ್ತಾಗಿದ್ದು, ಅವರಲ್ಲಿ ಪತಂಜಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಒಟ್ಟು 9 ಮಂದಿ ಸೋಂಕಿತರಲ್ಲಿ 8 ಮಂದಿ, ಮಂಗಳೂರಿನಲ್ಲಿ ಚಿಕಿತ್ಸೆ ಪಡೆದ ಒಬ್ಬ ಹಾಗೂ ಉಡುಪಿಯಲ್ಲಿ ಚಿಕಿತ್ಸೆ ಪಡೆದ ಒಬ್ಬ ಗರ್ಭಿಣಿ ಮಹಿಳೆ ಸೇರಿ ಒಟ್ಟು 10 ಮಂದಿ ಈಗಾಗಲೇ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಉಡುಪಿಯಲ್ಲಿ ದಾಖಲಾಗಿದ್ದ ಗರ್ಭಿಣಿಯ ಪತಿ ಇಲ್ಲಿನ ಪತಂಜಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈಗ ಬಿಡುಗಡೆಯಾಗುವ ಮೂಲಕ ಜಿಲ್ಲೆಯ ಕೋವಿಡ್ ಸೋಂಕಿತರ ಸಂಖ್ಯೆ ಶೂನ್ಯಕ್ಕೆ ತಲುಪಿದೆ ಎಂದು ತಿಳಿಸಿದ್ದಾರೆ.







