ಸೀಲ್ ಡೌನ್ ಜಾರಿಗೊಳಿಸಿರುವ ಬೋಳೂರಿಗೆ ಶಾಸಕ ಕಾಮತ್ ಭೇಟಿ

ಮಂಗಳೂರು : ಕೋವಿಡ್ 19 ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೀಲ್ ಡೌನ್ ಜಾರಿಗೊಳಿಸಿರುವ ಬೋಳೂರು ಪರಿಸರಕ್ಕೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ. ವೇದವ್ಯಾಸ್ ಕಾಮತ್ ಅವರು ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿದರು.
ಈ ವೇಳೆ ಮಾತನಾಡಿದ ಅವರು, ಬೋಳೂರು ಪ್ರದೇಶವನ್ನು ವೈರಾಣು ಹರಡದಂತೆ ಪೂರ್ಣ ಪ್ರಮಾಣದಲ್ಲಿ ಸೀಲ್ ಡೌನ್ ಜಾರಿಗೊಳಿಸ ಲಾಗಿದೆ. ಈ ಪ್ರದೇಶದಲ್ಲಿ 135 ಮನೆಗಳಿದ್ದು ಎಲ್ಲಾ ಕಡೆಗಳಲ್ಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಹಾಗೂ ನಿನ್ನೆ ಕೋವಿಡ್ ವೈರಸ್ ಸೋಂಕಿನಿಂದ ಮೃತಪಟ್ಟ ಮಹಿಳೆಯ ಶವ ಸಂಸ್ಕಾರ ಬೋಳೂರಿನಲ್ಲಿ ನಡೆಸಲಾಗಿದ್ದು, ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಈ ವಿಚಾರದಲ್ಲಿ ಸಾರ್ವಜನಿಕರು ಧೈರ್ಯಗೆಡದಂತೆ ಜಾಗೃತಿ ಮೂಡಿಸಲಾಯಿತು ಎಂದು ತಿಳಿಸಿದ್ದಾರೆ.
ಬೋಳೂರಿನ ಎಲ್ಲಾ ಮನೆಗಳಿಗೂ ಹಾಲು, ತರಕಾರಿ ಹಾಗೂ ದಿನಸಿ ಸಾಮಗ್ರಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ, ಬರ್ಕೆ ಪೋಲಿಸ್ ಠಾಣಾಧಿಕಾರಿ ಮತ್ತು ಸ್ಥಳಿಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ರೂಪುರೇಷೆ ಸಿದ್ಧಪಡಿಸಲಾಗಿದೆ. ಆ ನಿಟ್ಟಿನಲ್ಲಿ ಸ್ಥಳೀಯರ ಸಹಕಾರ ಅತೀ ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.
ನಮ್ಮೆಲ್ಲರ ರಕ್ಷಣೆಗಾಗಿ ಸೀಲ್ ಡೌನ್ ಜಾರಿಗೊಳಿಸಲಾಗಿದೆ. ಜಿಲ್ಲಾಡಳಿತ ಹಾಗೂ ಅಧಿಕಾರಿ ವರ್ಗ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತರಾಗಿದ್ದಾರೆ. ಸ್ವಯಂ ರಕ್ಷಣಾ ಕ್ರಮವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ವಚ್ಛತೆ, ಹಾಗೂ ಮನೆಯೊಳಗೆ ಇರುವಂತಹ ಕ್ರಮಗಳನ್ನು ಶಿಸ್ತಿನಿಂದ ಪಾಲಿಸಬೇಕು. ತಾವು ಮನೆಯೊಳಗಿದ್ದರೂ ಸ್ವಚ್ಛತೆ ಮತ್ತು ಮನೆಯವರೊಂದಿಗೂ ಸುರಕ್ಷಿತ ಅಂತರ ಕಾಪಾಡಿಕೊಳ್ಳಬೇಕು. ಈಗಾಗಲೇ ಒಂದು ಹಂತದಲ್ಲಿ ಕಿಟ್ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಅವಶ್ಯಕತೆ ಬಿದ್ದಾಗ ಮತ್ತಷ್ಟು ಆಹಾರ ಸಾಮಗ್ರಿಗಳನ್ನು ವಿತರಿಸಲಾಗುವುದು ಅಲ್ಲದೇ ಆಶಾಕಾರ್ಯಕರ್ತೆಯರು,ಆರೋಗ್ಯ ಇಲಾಖೆ ಸಿಬ್ಬಂದಿ ಮನೆ ಮನೆಗೆ ತಮ್ಮ ಆರೋಗ್ಯ ಪರೀಕ್ಷಿಸಲು ಭೇಟಿ ನೀಡಲಿದ್ದು ಆ ಸಂಧರ್ಭ ಪೂರ್ಣ ಪ್ರಮಾಣದೊಂದಿಗೆ ಅವರೊಂದಿಗೆ ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ಮನಪಾ ಸದಸ್ಯರಾದ ಜಗದೀಶ್ ಶೆಟ್ಟಿ ಬೋಳೂರು, ಸ್ಮಾರ್ಟ್ ಸಿಟಿ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು, ಪೋಲಿಸ್ ಅಧಿಕಾರಿಗಳು, ಮನಪಾ ಅಧಿಕಾರಿಗಳು, ಪಕ್ಷದ ಮುಖಂಡರಾದ ರಾಹುಲ್ ಶೆಟ್ಟಿ, ರೋಷನ್, ಚೇತನ್, ಎಂಪಿಡಬ್ಲ್ಯೂ ಕಾರ್ಯ ಕರ್ತರು, ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.







