ಪತ್ರಕರ್ತರು ಸಹ ಕೊರೋನ ವಾರಿಯರ್ಸ್ : ಮಾಂಕಾಳ ವೈದ್ಯ

ಭಟ್ಕಳ: ಸದಾ ಕರ್ತವ್ಯವನ್ನೇ ನಂಬಿರುವ ಹಾಗೂ ಸಮಾಜದ ಒಳಿತನ್ನೇ ಬಯಸುವ ಪತ್ರಕರ್ತರೂ ಕೂಡಾ ಕೊರೊನಾ ವಾರಿಯರ್ಸ ಎನ್ನುವುದನ್ನು ಪ್ರಧಾನಿಯೇ ಉಲ್ಲೇಖಿಸಿದ್ದಾರೆ. ಪತ್ರಕರ್ತರು ಸದಾ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದು ಅವರ ಆರೋಗ್ಯದ ಕುರಿತು ಕಾಳಜಿ ವಹಿಸಲು ಸಮಯವೆಲ್ಲಿ ಎನ್ನುವಂತ ಪರಿಸ್ಥಿತಿಯಲ್ಲಿ ಪತ್ರಕರ್ತರೊಂದಿಗೆ ತಾನಿದ್ದೇನೆ ಎನ್ನುವ ಸಂದೇಶ ಸಾರಿದ ಮಾಜಿ ಶಾಸಕ ಮಂಕಾಳ ಎಸ್. ವೈದ್ಯ ಅವರು ಪತ್ರಕರ್ತರಿಗೆ ಅಗತ್ಯದ ಸಾನಿಟೈಸರ್, ಮಾಸ್ಕ್ ಹಾಗೂ ನಿತ್ಯೋಪಯೋಗಿ ವಸ್ತುಗಳ ಕಿಟ್ ವಿತರಿಸುವ ಮೂಲಕ ಪತ್ರಕರ್ತರು ಸಮಾಜಕ್ಕೆ ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸುತ್ತಿದ್ದು ಅವರ ಹಿತವೂ ಮುಖ್ಯ ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ಅವರು ಭಟ್ಕಳದಲ್ಲಿ ಕೋವಿಡ್-19 ಸೋಂಕು ಬಂದಿರುವ ಸಂದರ್ಭದಲ್ಲೂ ಪತ್ರಕರ್ತರು ತಮ್ಮ ಆರೋಗ್ಯದ ಬಗ್ಗೆ ಅತೀ ಜಾಗೃತೆ ವಹಿಸಿ ತಮ್ಮ ಕಾರ್ಯವನ್ನು ಉತ್ತಮವಾಗಿ ನಿಭಾಯಿಸುವುದರ ಜತೆಗೆ ಇಲ್ಲಿನ ಆಗು ಹೋಗುಗಳ ಬಗ್ಗೆ ಜನರಿಗೆ ತಮ್ಮ ವರದಿಗಳ ಮೂಲಕ ನಿರಂತರವಾಗಿ ತಿಳಿಸಿ ಕೊಟ್ಟಿರುವ ಕಾರ್ಯ ಶ್ಲಾಘನೀಯವಾಗಿದೆ. ಕೊರೋನಾ ವೈರಸ್ಸಿನ ಗಂಭೀರತೆ ಕುರಿತು ಅರಿವು ಮೂಡಿಸುವಲ್ಲಿ ಪತ್ರಕರ್ತರ ಪಾತ್ರ ಬಹಳ ಮುಖ್ಯವಾಗಿದ್ದು ಅವರನ್ನು ಇಂತಹ ಸಂದರ್ಭದಲ್ಲಿ ನಿಮ್ಮೊಂದಿಗೆ ನಾವಿದ್ದೇವೆ ಎನ್ನುವುದು ಮುಖ್ಯವಾಗಿದೆ. ಆ ದಿಶೆಯಲ್ಲಿ ನಾನು ಭಟ್ಕಳ ಹಾಗೂ ಹೊನ್ನಾವರದ ಪತ್ರಕರ್ತರ ಹಿತ ಕಾಪಾಡುವಲ್ಲಿ ಸದಾ ಸಿದ್ಧನಿದ್ದು ಈ ಹಿಂದಿನಂತೆಯೇ ಅವರೊಂದಿಗೆ ನಾನಿದ್ದೇನೆ ಎಂದು ಹೇಳಲು ಇಚ್ಚಿಸುತ್ತೇನೆ ಎಂದರು.
ಅಧಿಕಾರ ಇರುತ್ತದೆ ಹೋಗುತ್ತದೆ ಆದರೆ ಪತ್ರಕರ್ತರು ಮಾತ್ರ ಸದಾ ಸಮಾಜದ ಒಳಿತಿಗಾಗಿ ದುಡಿಯುತ್ತಿರುತ್ತಾರೆ ಅವರ ಹಿತ ಕಾಪಾಡುವುದು ಕೂಡಾ ನಮ್ಮ ಧರ್ಮ ಎಂದ ಅವರು ಮುಂದೆಯೂ ಕೂಡಾ ಪತ್ರಕರ್ತರೊಂದಿಗೆ ಸದಾ ಸ್ಪಂಧಿಸುವ ಭರವಸೆಯನ್ನು ಸಹ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಸದಸ್ಯ ಅಲ್ಬರ್ಟ್ ಡಿಕೋಸ್ತ ಉಪಸ್ಥಿತರಿದ್ದರು.







