ಪ್ಲಾಸ್ಮಾ ದಾನ ಮಾಡಿದ ತಬ್ಲೀಗಿಗಳನ್ನು ಪ್ರಶಂಸಿಸಿದ ಐಎಎಸ್ ಅಧಿಕಾರಿಗೆ ರಾಜ್ಯ ಸರಕಾರದಿಂದ ನೋಟೀಸ್

ಫೈಲ್ ಚಿತ್ರ
ಬೆಂಗಳೂರು, ಮೇ 1 : ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡಲು ಪ್ಲಾಸ್ಮಾ ದಾನ ಮಾಡಿದ ತಬ್ಲೀಗಿ ಸದಸ್ಯರನ್ನು ಪ್ರಶಂಸಿಸಿ ಟ್ವೀಟ್ ಮಾಡಿದ ಹಿರಿಯ ಐಎಎಸ್ ಅಧಿಕಾರಿಗೆ ಕರ್ನಾಟಕ ಸರಕಾರ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.
ಈಗ ರಾಜ್ಯ ಸರಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯಾಗಿರುವ ಮುಹಮ್ಮದ್ ಮೊಹಸಿನ್ ಅವರು ಸರಕಾರದಿಂದ ನೋಟಿಸ್ ಪಡೆದವರು.
"300ಕ್ಕೂ ಹೆಚ್ಚು ತಬ್ಲೀಗಿ ಹೀರೋಗಳು ದೇಶ ಸೇವೆಗಾಗಿ ಪ್ಲಾಸ್ಮಾ ದಾನ ಮಾಡಿದ್ದಾರೆ. ಗೋದಿ ಮೀಡಿಯಾ ಎಲ್ಲಿದೆ ? ಈ ಜನರು ಮಾಡಿದ ಮಾನವೀಯ ಸೇವೆಯನ್ನು ಈ ಮಾಧ್ಯಮಗಳು ತೋರಿಸುವುದಿಲ್ಲ " ಎಂದು ಎಪ್ರಿಲ್ 27ರಂದು ಮೊಹಸಿನ್ ಅವರು ಟ್ವೀಟ್ ಮಾಡಿದ್ದರು.
ಮೊಹಸಿನ್ ಅವರ ಈ ಟ್ವೀಟ್ ಬಗ್ಗೆ ಮಾಧ್ಯಮಗಳು ಭಾರೀ ಚರ್ಚೆ ಪ್ರಾರಂಭಿಸಿ ಐಎಎಸ್ ಅಧಿಕಾರಿ ಈ ರೀತಿ ಟ್ವೀಟ್ ಮಾಡಿದ್ದು ಸರಿಯಲ್ಲ ಎಂದು ಹೇಳಿದ್ದವು. ಇದೀಗ ಸರಕಾರ ಅವರಿಗೆ ನೋಟೀಸ್ ನೀಡಿದೆ. ಐದು ದಿನಗಳೊಳಗೆ ಅವರು ನೋಟೀಸ್ ಗೆ ಉತ್ತರ ನೀಡಬೇಕಿದೆ.
ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮೊಹಸಿನ್ ಅವರು ಒಡಿಶಾದಲ್ಲಿ ಚುನಾವಣಾ ವೀಕ್ಷಕರಾಗಿ ಕರ್ತವ್ಯದಲ್ಲಿದ್ದಾಗ ಅಲ್ಲಿಗೆ ಚುನಾವಣಾ ಪ್ರಚಾರಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್ ಅನ್ನು ತಪಾಸಣೆ ಮಾಡಲು ಯತ್ನಿಸಿದರು ಎಂಬ ಕಾರಣಕ್ಕೆ ಚುನಾವಣಾ ಆಯೋಗ ಅವರನ್ನು ವೀಕ್ಷಕ ಕರ್ತವ್ಯದಿಂದ ಅಮಾನತು ಮಾಡಿ ಅವರು ಸುದ್ದಿಯಾಗಿದ್ದರು.







