ದಿಲ್ಲಿ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರ ಮೇಲೆ ದೇಶದ್ರೋಹ ಪ್ರಕರಣ

ಹೊಸದಿಲ್ಲಿ, ಮೇ 2: ದಿಲ್ಲಿ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಝಫರುಲ್ ಇಸ್ಲಾಂ ಖಾನ್ ವಿರುದ್ಧ ದಿಲ್ಲಿ ಪೊಲೀಸ್ ಪಡೆಯ ವಿಶೇಷ ಘಟಕ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್ ಮಾಡಿದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ.
ಭಾರತೀಯ ದಂಡಸಂಹಿತೆಯ ಸೆಕ್ಷನ್ 124 ಎ (ದೇಶದ್ರೋಹ) ಮತ್ತು 153 ಎ (ಎರಡು ಗುಂಪುಗಳ ಮೇಲೆ ಧರ್ಮ, ಜನಾಂಗ, ಹುಟ್ಟಿದ ಸ್ಥಳ, ನಿವಾಸ, ಭಾಷೆ ಆಧಾರದಲ್ಲಿ ದ್ವೇಷ ಹರಡಲು ಕುಮ್ಮಕ್ಕು) ಅನ್ವಯ ಖಾನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಜಂಟಿ ಆಯುಕ್ತ ನೀರಜ್ ಠಾಕೂರ್ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಲು ಖಾನ್ ನಿರಾಕರಿಸಿದ್ದು, ನಾನು ಎಫ್‌ಐಆರ್ ನೋಡಿಲ್ಲ. ಅದನ್ನು ನೋಡಿದ ಬಳಿಕವಷ್ಟೇ ಪ್ರತಿಕ್ರಿಯೆ ನೀಡುತ್ತೇನೆ ಎಂದು ಹೇಳಿದ್ದಾರೆ.
ಅವರು ಗುರುವಾರ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಕ್ಷಮೆ ಯಾಚಿಸಿದ್ದರು. ನಾನು ಆ ಟ್ವೀಟ್ ಮಾಡಲು ಇದು ಸೂಕ್ತ ಸಮಯವಲ್ಲ; ಕೆಲವರ ಮನಸ್ಸಿಗೆ ಇದರಿಂದ ನೋವಾಗಿದೆ. ಆದರೆ ಅದು ನನ್ನ ಉದ್ದೇಶವಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ವಸಂತ್‌ಕುಂಜ್ ನಿವಾಸಿಯೊಬ್ಬರ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ. ಲೋಧಿ ಕಾಲನಿ ಭಯೋತ್ಪಾದಕ ನಿಗ್ರಹ ಠಾಣೆಗೆ ಪ್ರಕರಣ ತಲುಪಿದ್ದು, ಸಫ್ದರ್‌ಜಂಗ್ ಎನ್‌ಕ್ಲೇವ್ ಎಸಿಪಿ ಮೂಲಕ ಎಫ್‌ಐಆರ್ ಬಂದಿದೆ ಎಂದು ಮೂಲಗಳು ಹೇಳಿವೆ.
ಎಪ್ರಿಲ್ 28ರಂದು ದಿಲ್ಲಿ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಖಾನ್ ಅವರು, ಟ್ವೀಟ್ ಹಾಗೂ ಫೇಸ್‌ಬುಕ್‌ನಲ್ಲಿ ಹಾಕಿದ ಪೋಸ್ಟ್ ಪ್ರಚೋದನಕಾರಿ ಹಾಗೂ ಸಾಮರಸ್ಯ ಕೆಡಿಸುವ ಉದ್ದೇಶದ್ದು ಎಂದು ದೂರುದಾರರು ಆರೋಪಿಸಿದ್ದರು.







