ತೀವ್ರ ಅನಾರೋಗ್ಯದ ವದಂತಿಗೆ ಗುರಿಯಾಗಿದ್ದ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಪ್ರತ್ಯಕ್ಷ

Photo: Twitter (@LokmanKaradag1)
ಸಿಯೊಲ್,ಮೇ2: ಕಳೆದ ಒಂದು ತಿಂಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆಂಬ ವದಂತಿಗೆ ಗುರಿಯಾಗಿದ್ದ ಉತ್ತರ ಕೊರಿಯಾದ ಮುಖಂಡ ಕಿಮ್ ಜಾಂಗ್ ಉನ್ ದೀರ್ಘ ಸಮಯದ ಬಳಿಕ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ರಸಗೊಬ್ಬರ ಕಾರ್ಖಾನೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಕಿಮ್ ಜಾಂಗ್ ರಿಬ್ಬನ್ ಕತ್ತರಿಸುತ್ತಿರುವುದು ಕಂಡುಬಂದಿದೆ.
ರಾಜಧಾನಿ ಫಿಯೊಂಗ್ಯಾಂಗ್ ಸಮೀಪದ ಸನ್ಚೊನ್ನಲ್ಲಿ ಶುಕ್ರವಾರ ನಡೆದಿರುವ ಕಾರ್ಯಕ್ರಮದಲ್ಲಿ ಕಿಮ್ ಭಾಗವಹಿಸಿದ್ದರು. ಅಣುಬಾಂಬ್ ಹೊಂದಿರುವ ದೇಶದ ನಾಯಕ ಕಿಮ್ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದು, ಈಗಾಗಲೇ ಮೃತಪಟ್ಟಿರುವ ಸಾಧ್ಯತೆಯೂ ಇದೆ ಎಂದು ಕಳೆದ ಮೂರು ವಾರಗಳಿಂದ ಭಾರೀ ಸುದ್ದಿಯಾಗಿತ್ತು.
ಎಪ್ರಿಲ್ 11ರಂದು ವರ್ಕರ್ಸ್ ಪಾರ್ಟಿಯ ಪಾಲಿಟ್ಬ್ಯುರೊ ಸಭೆಯಲ್ಲಿ ಭಾಗವಹಿಸಿದ ಬಳಿಕ ಉತ್ತರ ಕೊರಿಯಾದ ನಾಯಕ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಂಡಿರಲಿಲ್ಲ. ಕಿಮ್ ಫೈಟರ್ ಜೆಟ್ಗಳನ್ನು ಪರೀಕ್ಷಿಸಿದ್ದಾರೆ ಎಂದು ಸರಕಾರಿ ಮಾಧ್ಯಮಗಳು ಕೆಲವು ದಿನಗಳ ಬಳಿಕ ವರದಿಮಾಡಿದ್ದವು.
ಶುಕ್ರವಾರದ ರಸಗೊಬ್ಬರ ಕಾರ್ಖಾನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿದ್ದ ಕಿಮ್ ಜಾಂಗ್ಗೆ ನೆರೆದಿದ್ದ ಜನರು ಭವ್ಯ ಸ್ವಾಗತ ನೀಡಿದರು. ಸಮಾರಂಭದಲ್ಲಿ ಕಿಮ್ ಅವರ ಸಹೋದರಿ ಹಾಗೂ ಸಲಹೆಗಾರ್ತಿ ಕಿಮ್ ಯೊ ಜಾಂಗ್ ಕೂಡ ಭಾಗವಹಿಸಿದ್ದರು. .







