ರಾಜ್ಯದಲ್ಲಿ ಕೊರೋನ ಸೋಂಕಿಗೆ ಮತ್ತೊಂದು ಬಲಿ
ಮತ್ತೆ 9 ಹೊಸ ಸೋಂಕು ಪ್ರಕರಣ ಪತ್ತೆ, ಒಟ್ಟು ಸಂಖ್ಯೆ 598ಕ್ಕೇರಿಕೆ

ಬೆಂಗಳೂರು, ಮೇ 2: ರಾಜ್ಯದಲ್ಲಿ ಕೋವಿಡ್-19 ಸೋಂಕಿಗೆ ಮತ್ತೋರ್ವ ವ್ಯಕ್ತಿ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಈ ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 25ಕ್ಕೆ ಏರಿಕೆಯಾಗಿದೆ.
ಇಂದು ಮಧ್ಯಾಹ್ನ 12 ಗಂಟೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆಗೊಳಿಸಿರುವ ಬುಲೆಟ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಬೆಂಗಳೂರು ನಗರ ಜಿಲ್ಲೆಯ 63 ವರ್ಷದ ದೀಪಾಂಜಲಿ ನಗರದ ವ್ಯಕ್ತಿಯೊಬ್ಬರು ಕೊರೋನ ವೈರಸ್ ಸೋಂಕಿನಿಂದ ಶನಿವಾರ ಮೃತಪಟ್ಟಿರುವುದಾಗಿ ತಿಳಿಸಲಾಗಿದೆ.
ದೀರ್ಘಕಾಲೀನ ಮಧುಮೇಹ ಮತ್ತು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ 557ನೇ ಕೊರೋನ ಸೋಂಕಿತ ರೋಗಿಯಾಗಿದ್ದ ಇವರಿಗೆ 465ನೇ ರೋಗಿಯಿಂದ ಸೋಂಕು ತಗಲಿತ್ತು. ತೀವ್ರ ತರಹದ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಇವರನ್ನು ಎಪ್ರಿಲ್ 30ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ಮೃತಪಟ್ಟಿದ್ದಾರೆ. 465ನೇ ರೋಗಿ ಈಗಾಗಲೇ ಈ ಸೋಂಕಿನಿಂದ ಮೃತಪಟ್ಟಿದ್ದಾರೆ.
ಈ ನಡುವೆ ತೀವ್ರ ಉಸಿರಾಟ ಸಮಸ್ಯೆಯಿಂದ ಎಪ್ರಿಲ್ 29ರಂದು ಬೀದರ್ ನ ಆಸ್ಪತ್ರೆಯಲ್ಲಿ ಮೃತಪಟ್ಟ 82 ವರ್ಷದ ವೃದ್ಧರೊಬ್ಬರ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ ಎಂದು ಬುಲೆಟಿನ್ ತಿಳಿಸಿದೆ.
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಇವರನ್ನು ಎ.28ರಂದು ಬೀದರ್‌ನ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿತ್ತು. 590ನೇ ಕೇಸ್ ಆಗಿ ಗುರುತಿಸಲ್ಪಟ್ಟಿದ್ದ ಇವರಲ್ಲೂ ಕೊರೋನ ದೃಢಪಡುವುದರೊಂದಿಗೆ ಈ ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 25ಕ್ಕೇರಿದೆ.
ಈ ನಡುವೆ ರಾಜ್ಯದಲ್ಲಿ ಇಂದು ಮತ್ತೆ ಒಂಬತ್ತು ಮಂದಿಯಲ್ಲಿ ಹೊಸದಾಗಿ ಕೋವಿಡ್-19 ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 598ಕ್ಕೆ ಏರಿಕೆಯಾಗಿದೆ ಎಂದು ಬುಲೆಟಿನ್ ತಿಳಿಸಿದೆ.
ಶುಕ್ರವಾರ ಸಂಜೆ 5ರಿಂದ ಇಂದು ಮಧ್ಯಾಹ್ನ 12 ಗಂಟೆಯೊಳಗೆ ಹೊಸದಾಗಿ ಒಟ್ಟು 9 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಈ ಪೈಕಿ ಓರ್ವ ಮೃತಪಟ್ಟಿದ್ದಾರೆ. ವಿಜಯಪುರ, ತುಮಕೂರು ಜಿಲ್ಲೆಯಲ್ಲಿ ತಲಾ ಇಬ್ಬರಲ್ಲಿ ಸೋಂಕು ಪತ್ತೆಯಾಗಿದ್ದರೆ, ಬೀದರ್, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಜಿಲ್ಲೆ, ಬೆಳಗಾವಿ ಹಾಗೂ ಬಾಗಲಕೋಟೆಯ ಜಮಖಂಡಿಯಲ್ಲಿ ತಲಾ ಒಂದೊಂದು ಹೊಸ ಸೋಂಕು ಪ್ರಕರಣ ಪತ್ತೆಯಾಗಿದೆ.
ಸೋಂಕಿತ ಒಟ್ಟು ಪ್ರಕರಣಗಳಲ್ಲಿ 255 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 25 ಮಂದಿ ಮೃತಪಟ್ಟಿದ್ದಾರೆ.







