ಕಬ್ಬಿಣದ ಗೇಟುಗಳ ನಡುವಿನಿಂದ ಬಾಳೆಹಣ್ಣು ವಿತರಣೆ: ಹಸಿವಿನಿಂದ ಕಂಗಾಲಾಗಿ ಮುಗಿಬಿದ್ದ ವಲಸೆ ಕಾರ್ಮಿಕರು
ವಿಡಿಯೋ ವೈರಲ್

ಪ್ರಯಾಗರಾಜ್ : ನಗರದ ಕಾಲೇಜೊಂದರಲ್ಲಿ ಕಬ್ಬಿಣದ ಗೇಟುಗಳ ನಡುವಿನಿಂದ ವಲಸೆ ಕಾರ್ಮಿಕರಿಗೆ ಬಾಳೆಹಣ್ಣುಗಳು, ಬಿಸ್ಕತ್ತುಗಳು ಹಾಗೂ ನೀರಿನ ಬಾಟಲಿಗಳನ್ನು ವಿತರಿಸಿದ್ದು, ಹಸಿವಿನಿಂದ ಕಂಗಾಲಾದ ಕಾರ್ಮಿಕರು ಒಬ್ಬರನ್ನೊಬ್ಬರು ದೂಡುತ್ತಾ ಆಹಾರಕ್ಕಾಗಿ ಮುಗಿಬಿದ್ದ ಘಟನೆಯ ವೀಡಿಯೋ ವೈರಲ್ ಆಗಿದೆ.
ಈ ವಲಸಿಗ ಕಾರ್ಮಿಕರಿಗೆ ಆಹಾರ ವಿತರಿಸಲು ಸೂಕ್ತ ವ್ಯವಸ್ಥಿತ ಏರ್ಪಾಟು ಮಾಡದೇ ಇರುವುದರಿಂದ ಇಂತಹ ಒಂದು ಸಮಸ್ಯೆ ಏರ್ಪಟ್ಟಿತ್ತಲ್ಲದೆ ಸುರಕ್ಷಿತ ಅಂತರ ಕಾಪಾಡುವ ನಿಯಮವೂ ಗಾಳಿಗೆ ತೂರಲ್ಪಟ್ಟಿತ್ತು.
ವಲಸಿಗರಿಗೆ ಮಾನವೀಯತೆಯ ನೆಲೆಯಲ್ಲಿ ಸೂಕ್ತ ಏರ್ಪಾಟು ಮಾಡದ ಸ್ಥಳೀಯಾಡಳಿತವನ್ನು ಈ ವೀಡಿಯೋ ನೋಡಿದ ನಂತರ ಸಾಕಷ್ಟು ಮಂದಿ ಟೀಕಿಸಿದ್ದಾರೆ. ಈ ವೀಡಿಯೋವನ್ನು ಪ್ರಯಾಗರಾಜ್‍ನ ಸಿಎವಿ ಕಾಲೇಜಿನಲ್ಲಿ ಚಿತ್ರೀಕರಿಸಲಾಗಿದ್ದು ಮಧ್ಯ ಪ್ರದೇಶದಿಂದ ಆಗಮಿಸಿದ ವಲಸಿಗ ಕಾರ್ಮಿಕರನ್ನು ಉತ್ತರ ಪ್ರದೇಶದ ಅವರ ಜಿಲ್ಲೆಗಳಿಗೆ ಕಳುಹಿಸುವ ಮುನ್ನ ಇಲ್ಲಿ ವಿಶ್ರಾಂತಿಗಾಗಿ ಇರಿಸಲಾಗಿತ್ತು. ಇಲ್ಲಿಗೆ ಬಂದವರಿಗೆ ಆಹಾರದ ಏರ್ಪಾಟು ಸ್ಥಳೀಯಾಡಳಿತ ಮಾಡಿದ್ದರೂ ವ್ಯವಸ್ಥಿತವಾಗಿ ಏರ್ಪಾಟು ಮಾಡದೇ ಇದ್ದುದರಿಂದ ಹಸಿದ ಹೊಟ್ಟೆಯಲ್ಲಿದ್ದ ಕಾರ್ಮಿಕರು ಒಬ್ಬರ ಮೇಲೊಬ್ಬರು ಜೋತು ಬಿದ್ದು ಆಹಾರದ ಪ್ಯಾಕೆಟ್‍ಗಳತ್ತ ಕೈಚಾಚಿರುವುದು ಕಾಣಿಸುತ್ತದೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಪ್ರಯಾಗರಾಜ್ ಅಧಿಕಾರಿಗಳು “ಇದೇನು ಕ್ವಾರಂಟೈನ್ ಕೇಂದ್ರವಲ್ಲ. ಕಾರ್ಮಿಕರಿಗೆ ಬಾಳೆಹಣ್ಣುಗಳನ್ನು ವಿತರಿಸುತ್ತಿರುವ ಸಂದರ್ಭ ಗೊಂದಲ ಏರ್ಪಟ್ಟತ್ತು. ಆಗ ವಿತರಣೆಯನ್ನು ನಿಲ್ಲಿಸಿ ಅವರು ಬಸ್ಸು ಹತ್ತಿದ ಮೇಲೆ ನೀಡಲಾಯಿತು” ಎಂದು ಟ್ವೀಟ್ ಮಾಡಿದ್ದಾರೆ.
A quarantine centre in Prayagraj, UP. This is how migrant workers are treated in India. This is so humiliating and degrading. pic.twitter.com/ZoLw4vIqRT
— Ally Kash (@AllyKashPK) May 1, 2020







