ಶಾಸಕ ವೇದವ್ಯಾಸ ಕಾಮತ್‌ರನ್ನು ಕ್ವಾರಂಟೈನ್‌ಗೊಳಪಡಿಸಿ: ಡಿವೈಎಫ್‌ಐ
ಮಂಗಳೂರು, ಮೇ 2: ಜಿಲ್ಲಾಡಳಿತ ನೇಮಕ ಮಾಡಿರುವ ಸರಕಾರಿ ನೌಕರರಿಗೆ ಮಾತ್ರ ಪ್ರವೇಶವಿರುವ ಸೀಲ್‌ಡೌನ್ ಪ್ರದೇಶವಾದ ಬೋಳೂರು ಪರಿಸರಕ್ಕೆ ಶಾಸಕ ವೇದವ್ಯಾಸ ಕಾಮತ್‌ರವರು ಬಿಜೆಪಿ ಕಾರ್ಯಕರ್ತರ ಜತೆ ಭೇಟಿ ಲಾಕ್‌ಡೌನ್ ನಿಯಮ ಮಾತ್ರ ಅಲ್ಲ ಕೊರೋನ ತಡೆ ಮಾರ್ಗದರ್ಶಿ ಸೂತ್ರದ ಗಂಭೀರ ಉಲ್ಲಂಘನೆ ಮಾಡಿದ್ದಾರೆ ಎಂದು ಡಿವೈಎಫ್‌ಐ ಆರೋಪಿಸಿದೆ.
ಶಾಸಕ ವೇದವ್ಯಾಸ ಕಾಮತ್‌ರನ್ನು ತಕ್ಷಣ ಕ್ವಾರಂಟೈನ್‌ಗೊಳಪಡಿಸಬೇಕು ಎಂದು ಆಗ್ರಹಿಸಿರುವ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಕೊರೋನ ಸೋಂಕು ಹರಡದಂತೆ ತಡೆಯಲು ಶ್ರಮಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಆಡಳಿತ ಪಕ್ಷದ ಜನಪ್ರತಿನಿಧಿಗಳೇ ವಿಘ್ನಗಳನ್ನು ಒಡ್ಡುತ್ತಿದ್ದಾರೆ ಎಂದು ಆಕ್ಷೇಪಿಸಿದ್ದಾರೆ.
ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಜಿಲ್ಲಾಡಳಿತದ ಎಲ್ಲಾ ಕೆಲಸಗಳಿಗೆ ಅನಗತ್ಯ ಮೂಗು ತೂರಿಸುತ್ತಿದ್ದಾರೆ. ಆರೋಗ್ಯ ಕಾರ್ಯಕರ್ತರು, ಜಿಲ್ಲಾಡಳಿತ ನೇಮಿಸಿರುವ ಸರಕಾರಿ ನೌಕರರಿಗೆ ಮಾತ್ರ ಪ್ರವೇಶ ಇರುವ ನಗರದ ಸೀಲ್ ಡೌನ್ ಆದ ಪ್ರದೇಶ ಗಳಿಗೆ ಶಾಸಕ ವೇದವ್ಯಾಸ್ ಕಾಮತ್ ತನ್ನ ಕಾರ್ಯಕರ್ತರ ದಂಡು ಕಟ್ಟಿಕೊಂಡು ಭೇಟಿ ನೀಡಿದ್ದಾರೆ. ಅವರೆಲ್ಲರನ್ನೂ ತಕ್ಷಣವೇ ಕ್ವಾರಂಟೈನ್ ಮಾಡಬೇಕು, ಹಾಗೂ ಮುಖ್ಯಮಂತ್ರಿಗಳು ಜಿಲ್ಲಾಡಳಿತದ ಕೆಲಸಗಳಲ್ಲಿ ಅನಗತ್ಯ ಮಧ್ಯಪ್ರವೇಶಿಸದಂತೆ ತನ್ನ ಪಕ್ಷದ ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಬೇಕು ಎಂದು ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.
ಆರಂಭದ ದಿನಗಳಲ್ಲೆ ಜಿಲ್ಲಾಡಳಿತದ ಕೈ ಕಟ್ಟಿಹಾಕುವ ಕೆಲಸಗಳನ್ನು ವೇದವ್ಯಾಸ ಕಾಮತ್ ಹಾಗೂ ಬಿಜೆಪಿಯ ಜನಪ್ರತಿನಿಧಿಗಳು ಮಾಡುತ್ತಾ ಬಂದಿದ್ದಾರೆ. ಮೂರು ದಿನಗಳ ಸತತ ಕರ್ಫ್ಯೂ, ಪಾಸ್ ಗಳ ಬೇಕಾಬಿಟ್ಟಿ ವಿತರಣೆ, ಕೊರೋನ ಪೀಡಿತರ ಶವಸಂಸ್ಕಾರಕ್ಕೆ ಅಡ್ಡಿ ಮುಂತಾದ ವೈಫಲ್ಯಕ್ಕೆ ಈ ಮೂಗು ತೂರಿಸುವಿಕೆಯೇ ಕಾರಣ. ಈ ರೀತಿ ಜಿಲ್ಲಾಡಳಿತದ ಕೈಕಟ್ಟಿ ಹಾಕುವ ರಾಜಕೀಯ ಆಟಗಳಿಂದ ಜಿಲ್ಲೆಯಲ್ಲಿ ಪರಿಹಾರ ಕ್ರಮ, ಕೊರೋನ ವೈರಸ್ ಹರಡುವಿಕೆ ತಡೆಯುವಲ್ಲಿ ವೈಫಲ್ಯಗಳು ಎದ್ದು ಕಾಣುತ್ತಿವೆ. ಈಗ ಜಿಲ್ಲೆಯನ್ನು ಕಂಗೆಡಿಸಿರುವ ಬಂಟ್ವಾಳ ಕೊರೋನ ಪಾಸಿಟಿವ್ ಪ್ರಕರಣದ ಮೂಲ ಹಾಗೂ ಟ್ರಾಕ್ ಪತ್ತೆ ಹಚ್ಚಲು ಜಿಲ್ಲಾಡಳಿತಕ್ಕೆ ಇನ್ನೂ ಸಾಧ್ಯವಾಗಿಲ್ಲ. ಇದರಿಂದ ಕೊರೋನ ವ್ಯಾಪಕಗೊಳ್ಳುವ ಭೀತಿ ಜಿಲ್ಲೆಯನ್ನು ಆವರಿಸಿದೆ. ಜನತೆ ಭಯದಿಂದ ಬದುಕುವಂತಾಗಿದೆ. ಇಂತಹ ಗಂಭೀರ ಸನ್ನಿವೇಶದಲ್ಲಿ ಕೊರೋನ ಪಾಸಿಟಿವ್ ಪತ್ತೆಯಾದ ಪ್ರದೇಶಗಳನ್ನು ಸೀಲ್ ಡೌನ್ ಮಾಡಿ ರಾಷ್ಟ್ರೀಯ ನೀತಿಯಂತೆ ಅಂತಹ ಪ್ರದೇಶಗಳಿಗೆ ಹೊರಗಡೆಯ ಸಂಪರ್ಕವನ್ನು ಪೂರ್ಣವಾಗಿ ನಿಷೇಧಿಸಿ ವೈರಸ್ ಹರಡುವುದನ್ನು ತಡೆಯಲು ಜಿಲ್ಲಾಡಳಿತ ಹರಸಾಹಸ ಪಡುತ್ತಿದೆ. ಸೀಲ್ಡೌನ್ ಅಂದರೆ ಇಡೀ ಪ್ರದೇಶವೇ ಕ್ವಾರಂಟೈನ್ ಒಳಗಾದಂತೆ. ಅಲ್ಲಿನ ಜನರಿಗೆ ನೆರೆಹೊರೆಯ ಮನೆಗಳ ಸಂಪರ್ಕವೂ ಇರುವಂತಿಲ್ಲ. ಮನೆಗಳಿಂದ ಹೊರಬರುವಂತಿಲ್ಲ. ಆರೋಗ್ಯ ಕಾರ್ಯಕರ್ತರು, ಜಿಲ್ಲಾಡಳಿತ ನೇಮಿಸಿರುವ ನೌಕರರು ಹೊರತು ಪಡಿಸಿ ಮತ್ಯಾರೂ ಆ ಪ್ರದೇಶಕ್ಕೆ ಭೇಟಿ ನೀಡುವಂತಿಲ್ಲ. ವೈರಸ್ ಹರಡುವ ಸಾಧ್ಯತೆ ಅತಿ ಹೆಚ್ಚಿರುವ ಅಂತಹ ಪ್ರದೇಶಗಳಿಗೆ ಭೇಟಿ ನೀಡುವುದು ದಂಡನಾರ್ಹ ಅಪರಾಧ. ಇಷ್ಟೆಲ್ಲಾ ಅಪಾಯ ಇರುವ ಸಂದರ್ಭದಲ್ಲಿ ಶಾಸಕ ವೇದವ್ಯಾಸ ಕಾಮತ್ ಕಾರ್ಯಕರ್ತರ ದಂಡು ಕಟ್ಟಿ ಅಂತಹ ಪ್ರದೇಶಗಳಿಗೆ ಭೇಟಿ ನೀಡುತ್ತಿರುವುದು ಜಿಲ್ಲಾಡಳಿತದ ಪ್ರುತ್ನವನ್ನು ವ್ಯರ್ಥಗೊಳಿಸುತ್ತದೆ. ಶಾಸಕರ ಈ ಬೇಜವಾಬ್ದಾರಿತನ ಖಂಡನಾರ್ಹ. ಸೀಲ್ ಡೌನ್ ಪ್ರದೇಶಗಳಲ್ಲಿ ಅಡ್ಡಾಡಿ, ಜನರೊಂದಿಗೆ ಬೆರೆತಿರುವ ವೇದವ್ಯಾಸ ಕಾಮತ್ ಮತ್ತವರ ತಂಡ ಕೊರೋನ ವೈರಸ್ ಅಪಾಯಕ್ಕೆ ತನ್ನನ್ನು ತಾನು ಒಡ್ಡಿಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ.







