ದ.ಕ. ಜಿಲ್ಲೆಯಿಂದ ಬೇರೆ ಜಿಲ್ಲೆಗಳಿಗೆ ಪ್ರಯಾಣಿಸುವವರ ಗಮನಕ್ಕೆ
ದ.ಕ. ಜಿಲ್ಲೆಗೆ ಹೊರ ರಾಜ್ಯಗಳಿಂದ ಬರುವವರಿಗ ಮಾರ್ಗಸೂಚಿ

ಮಂಗಳೂರು, ಮೇ 2: ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ವೀಡಿಯೊ ಸಂವಾದದಲ್ಲಿ ನೀಡಲಾಗಿರುವ ಸೂಚನೆಯಿಂದ ದ.ಕ. ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ ಪ್ರಯಾಣಿಸುವವರಿಗೆ ಒಂದು ಬಾರಿ ಮಾತ್ರ ಪ್ರಯಾಣಿಸಲು ಅವಕಾಶವಿರುತ್ತದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಅರ್ಜಿದಾರರು ಮಂಗಳೂರು ನಗರ ವ್ಯಾಪ್ತಿಯಲ್ಲಿ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ತಮ್ಮ ಸಮೀಪದ ಪೊಲೀಸ್ ಠಾಣೆಗಳಲ್ಲಿ ಅರ್ಜಿ ಸಲ್ಲಿಸತಕ್ಕದ್ದು.
ಪ್ರಯಾಣಕ್ಕೆ ಅನುಮತಿಯನ್ನು ಪೊಲೀಸ್ ಆಯುಕ್ತರು/ ಪೊಲೀಸ್ ಅಧೀಕ್ಷಕರು/ ಪೊಲೀಸ್ ಉಪ ಆಯುಕ್ತರ ಕಚೇರಿಯಿಂದ ನೀಡಲಾಗುವುದು. ಕೋವಿಡ್ ಲಕ್ಷಣ ರಹಿತರಿಗೆ ಮಾತ್ರ ಪ್ರಯಾಣಿಸಲು ಅವಕಾಶ ನೀಡಲಾಗುತ್ತದೆ. ಅನುಮೋದಿತ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಮತ್ತು ಗ್ಲೌಸ್ ಧರಿಸಬೇಕು ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರದ ಮಾರ್ಗಸೂಚಿಯನ್ನು ಸಕಲ ಮುಂಜಾಗೃತಾ ಕ್ರಮಗಳನ್ನು ವಹಿಸಬೇಕು.
ಪ್ರಯಾಣಿಕರನ್ನು ಸ್ವೀಕರಿಸುವ ಜಿಲ್ಲೆಗಳಲ್ಲಿನ ಎಲ್ಲಾ ಕ್ವಾರಂಟೈನ್ ಸಂಬಂಧಿತ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ವಾಹನವು ಸಂಚರಿಸುವ ಮಾರ್ಗದ ಮಧ್ಯೆ ಎಲ್ಲಿಯೂ ನಿಲುಗಡೆ ಮಾಡುವಂತಿಲ್ಲ. ನೀಡಲಾಗುವ ಪಾಸ್‌ಗಳನ್ನು ದುರುಪಯೋಗ ಪಡಿಸುವುದು ಕಂಡು ಬಂದಲ್ಲಿ ಕಾನೂನು ರೀತಿಯ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ದ.ಕ. ಜಿಲ್ಲೆಗೆ ಹೊರ ರಾಜ್ಯಗಳಿಂದ ಬರುವವರಿಗ ಮಾರ್ಗಸೂಚಿ
ದ.ಕ. ಜಿಲ್ಲೆಗೆ ಇತರ ರಾಜ್ಯಗಳಿಂದ ಪ್ರಯಾಣಿಸುವವರು ಕೂಡಾ https://sevasindhu.karnataka.gov.in ಗೆ ಲಾಗಿನ್ ಆಗಿ ತಮ್ಮ ಹೆಸರು ಹಾಗೂ ಇತರ ವಿವರಗಳನ್ನು ನಮೂದಿಸಿ ನೋಂದಣಿ ಮಾಡಿಕೊಳ್ಳಬೇಕು. ಈ ಅರ್ಜಿಗಳನ್ನು ಕರ್ನಾಟಕ ರಾಜ್ಯದಿಂದ ವಿವಿಧ ರಾಜ್ಯಗಳಿಗೆ ನೇಮಿಸಲ್ಪಟ್ಟಿರುವ ನೋಡಲ್ ಅಧಿಕಾರಿಗಳು ಪರಿಶೀಲನೆ ಮಾಡಿ ಸಂಬಂಧಿಸಿದ ರಾಜ್ಯದ ನೋಡಲ್ ಅಧಿಕಾರಿಗಳೊಂದಿಗೆ ಚರ್ಚಿಸಿ, ಕರ್ನಾಟಕ ಸರಕಾರದಿಂದ ಅನುಮೋದಿಸಲ್ಪಟ್ಟ ಸ್ವೀಕೃತ ರಾಜ್ಯಗಳಿಂದ ಮಾತ್ರ ಪ್ರಯಾಣಿಕರಿಗೆ ಪ್ರಯಾಣಿಸಲು ಅವಕಾಶವಿರುತ್ತದೆ.
ಜಿಲ್ಲೆಗೆ ಮರಳಿ ಬರುವ ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ ವೈದ್ಯಕೀಯ ಸ್ಕ್ರೀನಿಂಗ್‌ಗೆ ಒಳಪಡಬೇಕು. ಕೋವಿಡ್ ಲಕ್ಷಣ ರಹಿತರಿಗೆ ಮಾತ್ರ ಪ್ರಯಾಣಿಸಲು ಅವಕಾಶ. ಪ್ರಯಾಣಿಕರು ಸರಕಾರಿ ಅಥವಾ ಖಾಸಗಿ ಬಸ್/ರೈಲ್ವೇ ವ್ಯವಸ್ಥೆಯನ್ನು ಬಳಸಬಹುದು. ಪ್ರಯಾಣಿಕರು ಟಿಕೆಟ್ ಖರೀದಿಸಿ ಪ್ರಯಾಣಿಸಬೇಕು. ಜಿಲ್ಲೆಗೆ ಆಗಮಿಸುವ ಪ್ರಯಾಣಿಕರನ್ನು ವೈದ್ಯಕೀಯ ಸಲಹೆ ಮೇರೆಗೆ ಹೋಮ್ ಕ್ವಾರಂಟೈನ್/ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುವುದು. ಕ್ವಾರಂಟೈನ್ ನಿಯಮಗಳನ್ನು ಅನುಷ್ಠಾನಗೊಳಿಸುವ ಜವಾಬ್ಧಾರಿ ಸ್ಥಳೀಯ ಪ್ರಾಧಿಕಾರದ್ದಾಗಿರುತ್ತದೆ.
ಆರೋಗ್ಯ ಇಲಾಖೆಯಿಂದ ವೈದ್ಯಕೀಯ ತಪಾಸಣೆ ನಡೆಸಲಾಗುವುದು. ಈ ಬಗ್ಗೆ ಸಂದೇಹಗಳಿದ್ದಲ್ಲಿ ಕಂಟ್ರೋಲ್ ರೂಂ. ನಂ. 1070/104/ 080 - 46848600/080-66692000 ಮತ್ತು ವಾಟ್ಸಾಪ್ ನಂ. 9745697456/ 9980299802 ಗೆ ಕರೆ ಮಾಡಬಹುದು.










