ಬೈಂದೂರಿನಲ್ಲಿ ಕೊರೋನ ಪಾಸಿಟಿವ್ ವದಂತಿ : ಜನರಿಗೆ ಆತಂಕ
ಉಡುಪಿ, ಮೇ 2: ಶುಕ್ರವಾರ ಮುಂಜಾನೆ ಬೆಳಗಾವಿ ಜಿಲ್ಲೆಯ ಖಾನಾಪುರ ದಿಂದ ಬೈಂದೂರಿಗೆ ಆಗಮಿಸಿದ ಶಿರೂರು ಕಳವಾಡಿಯ ವ್ಯಕ್ತಿಯೊಬ್ಬರು ಕೊರೋನಾ ವೈರಸ್ ಸೋಂಕಿಗೆ ಪಾಸಿಟಿವ್ ಆಗಿದ್ದಾರೆ ಎಂಬ ವದಂತಿ ಶನಿವಾರ ಹಬ್ಬಿದ್ದು, ಜಿಲ್ಲೆಯ ಜನರು ಆತಂಕಗೊಳ್ಳುವಂತಾಯಿತು.
ತಪ್ಪು ಮಾಹಿತಿಯಿಂದ ಹುಟ್ಟಿಕೊಂಡ ಈ ವದಂತಿ ಕುರಿತಂತೆ ಆರೋಗ್ಯ ಇಲಾಖೆ, ಆತ ಕೋವಿಡ್-19 ಪರೀಕ್ಷೆ ಮಾಡಿಸಿಕೊಂಡಿದ್ದ ಬೆಳಗಾವಿ ಯಿಂದ ಈ ಬಗ್ಗೆ ಸ್ಪಷ್ಟನೆ ಕೇಳಿದ್ದು, ಅವರಿಂದ ಈತನ ಪರೀಕ್ಷೆ ನೆಗೆಟಿವ್ ಬಂದಿರುವ ಬಗ್ಗೆ ಖಚಿತಪಡಿಸಿಕೊಂಡಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ, ಖಾನಾಪುರದಲ್ಲಿ ಹೊಟೇಲ್ ಉದ್ಯೋಗಿಯಾಗಿ ರುವ 48 ವರ್ಷ ಪ್ರಾಯದ ಈ ವ್ಯಕ್ತಿಯನ್ನು ಇಂದು ಕುಂದಾಪುರದ ಖಾಸಗಿ ಆಸ್ಪತ್ರೆಯೊಂದರ ಐಸೋಲೇಷನ್ ವಾರ್ಡಿಗೆ ಸೇರಿಸಲಾಗಿದ್ದು, ಮತ್ತೊಮ್ಮೆ ಆತನ ಗಂಟಲು ದ್ರವವನ್ನು ಪರೀಕ್ಷೆಗಾಗಿ ಪಡೆಯಲಾಗಿದೆ. ಅದನ್ನು ಪರೀಕ್ಷೆಗಾಗಿ ಮಂಗಳೂರಿಗೆ ಕಳುಹಿಸಲಾಗಿದೆ. ವರದಿ ನಾಳೆ ಬರುವ ನಿರೀಕ್ಷೆ ಇದೆ ಎಂದು ಡಿಎಚ್‌ಓ ತಿಳಿಸಿದರು.
ಬೆಳಗಾವಿಯ ವಿವಿಧ ಕಡೆಗಳಲ್ಲಿ ಉದ್ಯೋಗಿಗಳಾಗಿರುವ ಬೈಂದೂರು ತಾಲೂಕಿನ 10 ಮಂದಿ ಎರಡು ಕಾರುಗಳಲ್ಲಿ ನಿನ್ನೆ ಮುಂಜಾನೆ 3 ಗಂಟೆಗೆ ಬೈಂದೂರಿಗೆ ಬಂದಿದ್ದರು. ಇವರಲ್ಲಿ ನಾಲ್ಕೈದು ಮಂದಿ ಶಿರೂರು ಆಸುಪಾಸಿ ನವರಾದರೆ, ಉಳಿದವರು ಶಂಕರನಾರಾಯಣ, ಸಿದ್ಧಾಪುರ ಹಾಗೂ ಸಾಬರಕಟ್ಟೆ ಯವರೆಂದು ತಿಳಿದುಬಂದಿದೆ.
ಇದೀಗ ಇವರಲ್ಲಿ ಶಂಕಿತರೊಬ್ಬರನ್ನು ಕುಂದಾಪುರ ಆಸ್ಪತ್ರೆಯ ಐಸೋಲೇಷನ್ ವಾರ್ಡಿಗೆ ಸೇರಿಸಿದ್ದರೆ, ಉಳಿದ 9 ಮಂದಿಯಲ್ಲಿ ಇಬ್ಬರನ್ನು ಕುಂದಾಪುರದ ದೇವರಾಜ ಅರಸು ಹಾಸ್ಟೆಲ್‌ನಲ್ಲಿ ಹಾಗೂ ಉಳಿದ ಏಳು ಮಂದಿಯನ್ನು ಉಡುಪಿ ಬನ್ನಂಜೆಯಲ್ಲಿರುವ ಬಿಸಿಎಂ ಹಾಸ್ಟೆಲ್‌ನ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ನಾಳೆ ಆತನ ವರದಿ ನೆಗೆಟಿವ್ ಬಂದರೆ ಇವರೆಲ್ಲರನ್ನೂ ಬಿಡುಗಡೆ ಮಾಡಲಾಗುವುದು ಎಂದು ಡಾ.ಸೂಡ ತಿಳಿಸಿದರು.
ಮದುಮಗನಿಗೆ ಕ್ವಾರಂಟೈನ್ ಸುಳ್ಳು ಸುದ್ದಿ: ಈ ನಡುವೆ ಕಾರ್ಕಳ ತಾಲೂಕಿನ ಕುತ್ಯಾರಿನಲ್ಲಿ ನಡೆದ ಮದುವೆಯಲ್ಲಿ ಭಾಗವಹಿಸಿದ ಮದುಮಗ ಹಾಗೂ 20ಕ್ಕೂ ಅಧಿಕ ಮಂದಿಯನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ ಎಂಬ ಸುದ್ದಿ ಸಂಪೂರ್ಣ ಸುಳ್ಳು. ಇಂಥ ಯಾವ ಘಟನೆಯೂ ನಡೆದಿಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿಯವರು ತಿಳಿಸಿದ್ದಾರೆ ಎಂದು ಡಾ.ಸೂಡ ಸ್ಪಷ್ಟಪಡಿಸಿದರು.







