ವ್ಯಾಪಾರಿ ಮಳಿಗೆ ತೆರೆಯುವ ಬದಲು ಸರಕಾರ ಪ್ರಾರ್ಥನಾಲಯ ತೆರೆಯಲಿ: ಯುನಿವೆಫ್ ಕರ್ನಾಟಕ
ಮಂಗಳೂರು, ಮೇ 2: ಲಾಕ್‌ಡೌನ್ ಮಧ್ಯೆಯೂ ಕೊರೋನ ವೈರಸ್ ರೋಗ ದೇಶವ್ಯಾಪಿ ಹರಡುತ್ತಿದೆ. ಸರಕಾರ ಲಾಕ್‌ಡೌನ್ ಮೂಲಕ ಕಟ್ಟುನಿಟ್ಟಿನ ಕ್ರಮ ಜರುಗಿಸುವ ಬದಲು ವ್ಯಾಪಾರಿ ಮಳಿಗೆ ತೆರೆಯಲು ಮುಂದಾಗಿರುವುದು ಅಕ್ಷಮ್ಯ. ಅದರ ಬದಲು ಪ್ರಾರ್ಥನಾಯಲು ತೆರೆಯಲಿ ಎಂದು ಯುನಿವೆಫ್ ಕರ್ನಾಟಕ ಆಗ್ರಹಿಸಿದೆ.
ಯುನಿವೆಫ್ ಕರ್ನಾಟಕ ರಾಜ್ಯಾಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಹೇಳಿಕೆಯೊಂದನ್ನು ನೀಡಿ ಈದ್ ಹಬ್ಬದ ನೆಪದಲ್ಲಿ ಬಟ್ಟೆ ಮಳಿಗೆಗಳನ್ನು ತೆರೆಯುವ ಮುನ್ಸೂಚನೆಗಳು ಲಭಿಸುತ್ತಿದೆ. ಅಧಿಕಾರಿಗಳು ಇದಕ್ಕೆ ಅವಕಾಶ ನೀಡಬಾರದು. ಇತ್ತೀಚಿಗೆ ನಿಝಾಮುದ್ದೀನ್ ಪ್ರಕರಣಗಳಲ್ಲಿ ಮುಸ್ಲಿಂ ಸಮುದಾಯವನ್ನು ಮಾಧ್ಯಮಗಳು ಮಿತಿಮೀರಿ ಅಪರಾಧಿಗಳಾಗಿ ಚಿತ್ರೀಕರಿಸಿದ ರೀತಿ ಸೋಂಕಿಗೆ ಧರ್ಮದ ಲೇಪವನ್ನು ಹಚ್ಚಿರುವುದು ಇಡೀ ದೇಶವೇ ಕಂಡಿದೆ. ಹಬ್ಬಕ್ಕಾಗಿ ಮಳಿಗೆಯನ್ನು ತೆರೆಯಲು ಸರಕಾರ ತೀರ್ಮಾನಿಸಿದರೆ ಮುಸ್ಲಿಮ್ ಸಮುದಾಯವನ್ನು ಟಾರ್ಗೆಟ್ ಮಾಡು ವುದನ್ನು ಕಾಯಕಮಾಡಿರುವ ಮಾಧ್ಯಮ ಕ್ಕೆ ಇದು ಆಹಾರವಾಗುವ ಸಾಧ್ಯತೆಯಿದೆ. ಹಾಗಾಗಿ ಹಬ್ಬಕ್ಕೆ ಮೊದಲು ಲಾಕ್‌ಡೌನ್ ಸಡಿಲಿಸಬಾರದು ಎಂದು ತಿಳಿಸಿದ್ದಾರೆ.
ಸೋಂಕುಗಳು ನಿಯಂತ್ರಣಕ್ಕೆ ಬಂದಿದೆ ಎಂದು ಸರಕಾರಕ್ಕೆ ಮನವರಿಕೆಯಾದರೆ ವ್ಯಾಪಾರಿ ಮಳಿಗೆಗಳನ್ನು ತೆರೆಯುವ ಬದಲು ಪ್ರಾರ್ಥನಾಲ ಯಗಳನ್ನು ತೆರೆಯಲಿ. ಮಸೀದಿಗಳಲ್ಲಿ ನಮಾಝ್ಗೆ ಅವಕಾಶ ಕಲ್ಪಿಸಿದರೆ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ನಮಾಜ್ ಮಾಡಲು ಸಿದ್ಧರಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಸೋಂಕು ನಿಯಂತ್ರಣಕ್ಕೆ ಬಾರದ ಕಾರಣ ಯಾವುದೇ ಶಾಪಿಂಗ್‌ಗೆ ಅವಕಾಶ ಕಲ್ಪಿಸಬಾರದು ಎಂದು ಆಗ್ರಹಿಸಿದ್ದಾರೆ.





