ಖಾಸಗಿ ವೀಡಿಯೊ ಬಹಿರಂಗಗೊಳಿಸುವುದಾಗಿ ಇ-ಮೇಲ್‌ಗಳ ಮೂಲಕ ಬೆದರಿಕೆಯೊಡ್ಡಿ ಹಣ ಸುಲಿಗೆ
ಭಯಪಡದಂತೆ, ಹಣ ನೀಡದಂತೆ ಸೈಬರ್ ಸುರಕ್ಷಾ ದಳದ ಎಚ್ಚರಿಕೆ

ಹೊಸದಿಲ್ಲಿ,ಮೇ 2: ಬಳಕೆದಾರನ ಖಾಸಗಿ ಕ್ಷಣಗಳ ವೀಡಿಯೊವನ್ನು ಚಿತ್ರೀಕರಿಸಿದ್ದು,ಕೇಳಿದಷ್ಟು ಹಣವನ್ನು ಕ್ರಿಪ್ಟೊ ಕರೆನ್ಸಿ ರೂಪದಲ್ಲಿ ನೀಡದಿದ್ದರೆ ವೀಡಿಯೊವನ್ನು ಬಹಿರಂಗಗೊಳಿಸುವುದಾಗಿ ಬೆದರಿಕೆಯೊಡ್ಡುತ್ತಿರುವ ನಕಲಿ ಇ-ಮೇಲ್ ಅಭಿಯಾನದ ವಿರುದ್ಧ ಭಾರತದ ಕಂಪ್ಯೂಟರ್ ತುರ್ತು ಪ್ರತಿಕ್ರಿಯಾ ತಂಡ (ಸಿಇಆರ್‌ಟಿ-ಇನ್)ವು ಅಂತರ್ಜಾಲ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ.
ಇಂತಹ ಇ-ಮೇಲ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲವಾದರೂ ಯಾವುದೇ ಸಾಮಾಜಿಕ ಜಾಲತಾಣ ಅಥವಾ ಇತರ ಆನ್‌ಲೈನ್ ವೇದಿಕೆಗಳಿಗೆ ಲಾಗ್‌ಇನ್ ಆಗಲು ಬಳಸುವ ಪಾಸ್‌ವರ್ಡ್‌ಗಳು ಸೋರಿಕೆಯಾಗಿರುವ ಅನುಮಾನ ಬಂದರೆ ಅಂತಹ ಪಾಸ್‌ವರ್ಡ್‌ಗಳನ್ನು ಬದಲಿಸುವಂತೆ ಸಿಇಆರ್‌ಟಿ-ಇನ್ ಪ್ರಕಟಣೆಯಲ್ಲಿ ಬಳಕೆದಾರರಿಗೆ ಸೂಚಿಸಿದೆ.
ಬಳಕೆದಾರರ ಕಂಪ್ಯೂಟರ್ ಅನ್ನು ಹ್ಯಾಕ್ ಮಾಡಲಾಗಿದೆ ಮತ್ತು ಅವರ ವೆಬ್‌ಕ್ಯಾಮ್ ಬಳಸಿ ವೀಡಿಯೊವನ್ನು ಚಿತ್ರೀಕರಿಸಲಾಗಿದೆ ಹಾಗೂ ಬಳಕೆದಾರರ ಪಾಸ್‌ವರ್ಡ್‌ಗಳೂ ತಮಗೆ ಗೊತ್ತಿವೆ ಎಂಬ ಒಕ್ಕಣೆಯೊಂದಿಗೆ ಹಲವಾರು ಇ-ಮೇಲ್‌ಗಳನ್ನು ವಂಚಕರು ರವಾನಿಸಿದ್ದಾರೆ. ಈ ಇ-ಮೇಲ್‌ಗಳು ನಕಲಿ ಮತ್ತು ವಂಚನೆಗಳಾಗಿವೆ. ಇವುಗಳ ಬಗ್ಗೆ ಚಿಂತಿಸಬೇಕಿಲ್ಲ ಎಂದು ತಿಳಿಸಿರುವ ಸಿಇಆರ್‌ಟಿ-ಇನ್,ಇಂತಹ ‘ಹಫ್ತಾ’ ವಸೂಲಿ ಇ-ಮೇಲ್‌ಗಳ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿದೆ.
ವಂಚಕರು ಮೊದಲಿಗೆ ಬಳಕೆದಾರರ ಹಳೆಯ ಪಾಸ್‌ವರ್ಡ್‌ನ್ನು ಮೇಲ್‌ನಲ್ಲಿ ಉಲ್ಲೇಖಿಸಿ ಗಮನ ಸೆಳೆಯಲು ಪ್ರಯತ್ನಿಸುತ್ತಾರೆ. ಬಳಿಕ ಕಂಪ್ಯೂಟರ್ ಪರಿಭಾಷೆಯಲ್ಲಿ ಕಥೆಯೊಂದನ್ನು ಹೆಣೆದು,ಅಶ್ಲೀಲ ವೆಬ್‌ಸೈಟ್‌ನಲ್ಲಿ ತಾವು ವೈರಸ್ ಅನ್ನು ಹರಿಬಿಟ್ಟಿದ್ದು,ಬಳಕೆದಾರ ವೀಡಿಯೊವನ್ನು ವೀಕ್ಷಿಸುತ್ತಿರುವಾಗ ಅವರ ವೆಬ್‌ಕ್ಯಾಮ್ ಮತ್ತು ಡಿಸ್‌ಪ್ಲೇ ಸ್ಕ್ರೀನ್ ಅನ್ನು ಹ್ಯಾಕ್ ಮಾಡಲಾಗಿದೆ ಹಾಗೂ ಎಲ್ಲ ಮೆಸೆಂಜರ್,ಫೇಸ್‌ಬುಕ್ ಮತ್ತು ಇ-ಮೇಲ್ ಸಂಪರ್ಕಗಳ ಮಾಹಿತಿಗಳಿಗೆ ಕನ್ನ ಹಾಕಲಾಗಿದೆ ಎಂದು ತಿಳಿಸುವ ವಂಚಕರು,ಕೇಳಿದಷ್ಟು ಹಣವನ್ನು 24 ಗಂಟೆಗಳಲ್ಲಿ ಬಿಟ್ ಕಾಯಿನ್ ಮೂಲಕ ನೀಡದಿದ್ದರೆ ವೀಡಿಯೊಗಳನ್ನು ಸಂಬಂಧಿಕರು,ಸಹೋದ್ಯೋಗಿಗಳು ಮತ್ತಿತರರಿಗೆ ರವಾನಿಸುವುದಾಗಿ ಬೆದರಿಕೆಯೊಡ್ಡುತ್ತಾರೆ ಎಂದು ಅದು ತಿಳಿಸಿದೆ.
ನಕಲಿ ಇ-ಮೇಲ್‌ನಲ್ಲಿ ಉಲ್ಲೇಖಿಸಿರುವ ಪಾಸ್‌ವರ್ಡ್ ಬಳಕೆದಾರ ಹಿಂದೆ ಬಳಸಿರುವ ನಿಜವಾದ ಪಾಸ್‌ವರ್ಡ್ ಆಗಿರಬಹುದು,ಆದರೆ ವಂಚಕರು ಬಳಕೆದಾರನ ಖಾತೆಗಳನ್ನು ಹ್ಯಾಕ್ ಮಾಡಿ ಅದನ್ನು ಎಗರಿಸಿದ್ದಲ್ಲ. ಆದರೆ ಆನ್‌ಲೈನ್‌ನಲ್ಲಿ ಸೋರಿಕೆಯಾಗಿರುವ ಡಾಟಾಗಳಿಂದ ಪಡೆದಿರುತ್ತಾರೆ ಎಂದಿರುವ ಸಿಇಆರ್‌ಟಿ-ಇನ್,ಇಂತಹ ಇ-ಮೇಲ್‌ಗಳಿಗೆ ಸೊಪ್ಪು ಹಾಕದಂತೆ ಮತ್ತು ವಂಚಕರಿಗೆ ಹಣವನ್ನು ಪಾವತಿಸದಂತೆ ಎಚ್ಚರಿಕೆ ನೀಡಿದೆ ಮತ್ತು ತಮ್ಮ ಪಾಸ್‌ವರ್ಡ್‌ಗಳನ್ನು ಬದಲಿಸಿಕೊಳ್ಳುವಂತೆ ಸಲಹೆ ನೀಡಿದೆ.







