ಈದ್ ವಸ್ತ್ರದ ಮೊತ್ತ ಬಡರೋಗಿಗಳ ಔಷಧಿಗೆ ವಿನಿಯೋಗಿಸಲು ಮಂಗಳೂರಿನ ಎಂ. ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ತೀರ್ಮಾನ

ಸಾಂದರ್ಭಿಕ ಚಿತ್ರ
ಮಂಗಳೂರು : ಕೊರೋನ ವೈರಸ್ ಹೋಗಲಾಡಿಸಲು ಸರಕಾರ ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಲಾಕ್ ಡೌನ್ ಆದೇಶ ಹೊರಡಿಸಿರುವುದರಿಂದ ಪವಿತ್ರ ತಿಂಗಳು ರಮಝಾನ್ ನಲ್ಲಿ ಮಸೀದಿಗಳಲ್ಲಿ 5 ಹೊತ್ತಿನ ನಮಾಝ್, ವಿಶೇಷ ತರಾವೀಹ್ ನಮಾಝ್, ಜುಮಾ ನಮಾಝ್ ನಿರ್ವಹಿಸಲಾಗುತ್ತಿಲ್ಲ. ಇಫ್ತಾರ್ ಕೂಟ ನೆರವೇರುತ್ತಿಲ್ಲ. ಎಲ್ಲವೂ ಸರಳವಾಗಿ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಮುಂಬರುವ 'ಈದುಲ್ ಫಿತರ್' ಹಬ್ಬಕ್ಕೆ ಹೊಸ ವಸ್ತ್ರ ಖರೀದಿ ಮಾಡದೇ ಇರಲು ಮಂಗಳೂರಿನ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ತೀರ್ಮಾನವನ್ನು ಕೈಗೊಂಡಿದೆ.
ಎಂ.ಫ್ರೆಂಡ್ಸ್ ಸಂಸ್ಥೆಯಲ್ಲಿ 55 ಮಂದಿ ಸದಸ್ಯರಿದ್ದು, ಅವರೆಲ್ಲಾ ಹಾಗೂ ಅವರ ಕುಟುಂಬಿಕರು ಹೊಸವಸ್ತ್ರ, ಫ್ಯಾನ್ಸಿ ಸಾಮಗ್ರಿಗಳನ್ನು ಖರೀದಿಸುವುದಿಲ್ಲ ಎಂದು ಪ್ರತಿಜ್ಞೆ ಕೈಗೊಂಡಿದ್ದಾರಲ್ಲದೇ ಅದರ ಮೊತ್ತವನ್ನು ಬಡ/ಅಶಕ್ತ ರೋಗಿಗಳಿಗೆ ಬೇಕಾದ ಔಷಧಿಯನ್ನು ಪೂರೈಸಲು ನಿರ್ಣಯಿಸಲಾಗಿದೆ.
ಎಂ.ಫ್ರೆಂಡ್ಸ್ ಸಂಬಂಧಿಕರ ಅಥವಾ ಪರಿಸರದ ಬಡ ರೋಗಿಗಳಿಗೆ ಪ್ರಥಮ ಪ್ರಾಶಸ್ತ್ಯ ನೀಡಲು ತೀರ್ಮಾನಿಸಲಾಗಿದೆ ಎಂದು ಮಂಗಳೂರು ಎಂ. ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಕಾರ್ಯದರ್ಶಿ ರಶೀದ್ ವಿಟ್ಲ, ಕೋಶಾಧಿಕಾರಿ ಅಬೂಬಕರ್ ನೋಟರಿ ತಿಳಿಸಿದ್ದಾರೆ.







