ರಾಜ್ಯಾದ್ಯಂತ ಆರ್ಥಿಕ ಚಟುವಟಿಕೆಗಳಿಗೆ ಹಸಿರು ನಿಶಾನೆ: ಸಚಿವ ಆರ್.ಅಶೋಕ್

ಬೆಂಗಳೂರು, ಮೇ 2: ಕೋವಿಡ್-19 ಅನ್ನು ಪರಿಣಾಮಕಾರಿಯಾಗಿ ಎದುರಿಸಲು ನಿರ್ಧರಿಸಿರುವ ರಾಜ್ಯ ಸರಕಾರವು, ರಾಜ್ಯಾದ್ಯಂತ ಆರ್ಥಿಕ ಚಟುವಟಿಕೆಗಳಿಗೆ ಹಸಿರು ನಿಶಾನೆ ತೋರಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲೆಕ್ಟ್ರಿಕ್ ಅಂಗಡಿಗಳು, ಟೈಲ್ಸ್ ಅಂಗಡಿಗಳನ್ನು ತೆರೆಯಲು ಸೂಚನೆ ನೀಡಲಾಗಿದೆ. ಇಂದಿನಿಂದಲೆ ಜಿಲ್ಲಾಧಿಕಾರಿ ಬಳಿ ಅನುಮತಿ ಪಡೆದು ಈ ಅಂಗಡಿಗಳನ್ನು ತೆರೆಯಬಹುದಾಗಿದೆ. ರೆಡ್ ಝೋನ್ ಸೇರಿದಂತೆ ಎಲ್ಲ ಕಡೆ ಕಾರ್ಖಾನೆ ಆರಂಭಿಸಬಹುದಾಗಿದೆ ಎಂದರು.
ಕೇವಲ ಎರಡು ಗಂಟೆಗಳ ಒಳಗೆ ಜಿಲ್ಲಾಧಿಕಾರಿ ಬಳಿಯಿಂದ ನಿಮಗೆ ಅನುಮತಿ ಸಿಗುತ್ತದೆ. ಈಗಾಗಲೆ ವೋಲ್ವೊ ಕಾರ್ಖಾನೆಗೆ ಅನುಮತಿ ನೀಡಲಾಗಿದೆ. ಕಾರ್ಖಾನೆಗಳಲ್ಲಿ ಶೇ.33ರಷ್ಟು ಮಾತ್ರ ಕಾರ್ಮಿಕರು ಇರಬೇಕು. ಶರತ್ತು ಬದ್ಧವಾಗಿ ಮಾರ್ಕೆಟ್‍ಗಳನ್ನು ತೆರೆಯಲು ತೀರ್ಮಾನಿಸಲಾಗಿದೆ. ಮಾರುಕಟ್ಟೆಗಳಲ್ಲಿ ತರಕಾರಿ, ಹಣ್ಣು, ಔಷಧಿಗಳನ್ನು ಮಾತ್ರ ಮಾರಾಟಕ್ಕೆ ಅವಕಾಶ ನೀಡಲಾಗಿದ್ದು, ಬೇರೆ ಯಾವುದೆ ರೀತಿಯ ಚಟುವಟಿಕೆಗಳನ್ನು ನಡೆಸಲು ನಿರ್ಬಂಧ ವಿಧಿಸಲಾಗಿದೆ ಎಂದು ಅಶೋಕ್ ತಿಳಿಸಿದರು.
ರಾಜಧಾನಿ ಬೆಂಗಳೂರು ಜಿಲ್ಲೆಯನ್ನು ವಿಧಾನಸಭಾ ಕ್ಷೇತ್ರಾವಾರು ನಾಲ್ಕು ವಲಯಗಳನ್ನಾಗಿ ವಿಂಗಡಿಸಲು ತೀರ್ಮಾನಿಸಲಾಗಿದೆ ಎಂದು ಅಶೋಕ್ ಹೇಳಿದರು.







