ನನ್ನನ್ನು ಪ್ರತಿ ಹಂತದಲ್ಲೂ ಆಯುಕ್ತರು ಕಡೆಗಣಿಸುತ್ತಿದ್ದಾರೆ: ಮೈಸೂರು ಮೇಯರ್ ತಸ್ನೀಂ ಆರೋಪ
ಕೊರೋನ ವಿರುದ್ಧದ ಹೋರಾಟ

ಮೈಸೂರು,ಮೇ.2: ಕೊರೋನ ಹಿನ್ನಲೆಯಲ್ಲಿ ಆಹಾರ ಪದಾರ್ಥಗಳ ಕಿಟ್ ಹಂಚಿಕೆಯಲ್ಲಿ ಆಯುಕ್ತರು ಮತ್ತು ಮೇಯರ್ ನಡುವೆ ಜಟಾಪಟಿ ಏರ್ಪಟ್ಟಿದೆ. ಈ ಸಂಬಂಧ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಮೇಯರ್ ತಸ್ನೀಂ, ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಆಹಾರಗಳ ಕಿಟ್ ವಿತರಣೆ ವಿಚಾರವಾಗಿ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ, ನಾನು ಜನರಿಗೆ ಉತ್ತರ ನೀಡಬೇಕಿದೆ. ನನಗೆ ಕೆಲಸ ಮಾಡಲು ಆಗುತ್ತಿಲ್ಲ, ಆಯುಕ್ತರು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಅಧಿಕಾರಿಗಳು ತಮಗೆ ಇಷ್ಟ ಬಂದ ಹಾಗೆ ನಡೆದುಕೊಳ್ಳುತಿದ್ದಾರೆ. ದಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಆಹಾರ ಪದಾರ್ಥಗಳನ್ನು ನೀಡಿದ್ದಾರೆ. ಯಾರು ಎಷ್ಟು ಕೊಟ್ಟರು ಎಂಬ ಮಾಹಿತಿಯೇ ಇಲ್ಲ. ಆಯುಕ್ತರನ್ನು ಕೇಳಿದರೆ ಬೇಜವಾಬ್ದಾರಿಯ ಉತ್ತರ ನೀಡುತ್ತಾರೆ. ಅಧಿಕಾರಿಗಳ ನಡುವೆ ಹೊಂದಾಣಿಕೆಯ ಕೊರತೆ ಇದೆ. ಇಂತಹ ಸಂದರ್ಭದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ಇವರು ಮೇಯರ್ ಸ್ಥಾನಕ್ಕೂ ಬೆಲೆ ಕೊಡುತ್ತಿಲ್ಲ, ಸದಸ್ಯರ ಸ್ಥಾನಕ್ಕೂ ಬೆಲೆ ಕೊಡುತ್ತಿಲ್ಲ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರುವುದಾಗಿ ಹೇಳಿದರು.
ನನ್ನನ್ನು ಪ್ರತಿ ಹಂತದಲ್ಲೂ ಆಯುಕ್ತ ಗುರುದತ್ ಹೆಗಡೆ ಕಡೆಗಣಿಸುತ್ತಿದ್ದಾರೆ. ಮೊನ್ನೆ ಪಾಲಿಕೆಯ ಮೊಬೈಲ್ ಕ್ಲಿನಿಕ್ ಕಾರ್ಯಕ್ರಮಕ್ಕೆ ನನಗೆ ಸರಿಯಾಗಿ ಆಹ್ವಾನವನ್ನೇ ನೀಡಿರಲಿಲ್ಲ. ಪಾಲಿಕೆ ಸದಸ್ಯರಿಗೆ ಸ್ಥಳೀಯ ಸಮಸ್ಯೆಗಳ ಬಗ್ಗೆ ಗೊತ್ತಿರುತ್ತದೆ. ಆದರೆ ಇವರು ಪಾಲಿಕೆ ಸದಸ್ಯರನ್ನೇ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ, ಇದು ನನಗೆ ತೀವ್ರ ಬೇಸರ ಉಂಟು ಮಾಡಿದೆ ಎಂದು ಬಹಿರಂಗವಾಗಿ ತಮ್ಮ ಅಸಮಾಧಾನ ಹೊರಹಾಕಿದರು.
ಇದೇ ರೀತಿ ಮುಂದುವರಿದರೆ ಸತ್ಯಾಗ್ರಹ ಮಾಡಲು ನಾನು ಸಿದ್ಧವಿದ್ದು, ತಸ್ನೀಂಗೆ ಅವರು ಗೌರವ ಕೊಡುವುದು ಬೇಡ, ಮೇಯರ್ ಸ್ಥಾನಕ್ಕಾದರೂ ಗೌರವ ನೀಡಲಿ ಎಂದು ಹೇಳಿದರು.







