ಬೆಂಗಳೂರು: ಪೊಲೀಸರು, ವೈದ್ಯರು, ಆಶಾ ಕಾರ್ಯಕರ್ತೆಯರಿಗೆ ಹೂ ಸುರಿಸಿ ಅಭಿನಂದನೆ
ಕೊರೋನ ವಿರುದ್ಧದ ಹೋರಾಟ

ಬೆಂಗಳೂರು, ಮೇ 2: ಕೊರೋನ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರು, ವೈದ್ಯರು, ಆಶಾ ಕಾರ್ಯಕರ್ತೆಯರು ಹಾಗೂ ಬಿಬಿಎಂಪಿ ಪೌರ ಕಾರ್ಮಿಕರಿಗೆ ಇಲ್ಲಿನ ಸಿದ್ದಾಪುರದಲ್ಲಿ ಸಾರ್ವಜನಿಕರು ಪುಷ್ಪವೃಷ್ಟಿ ಮೂಲಕ ಅಭಿನಂದನೆ ಸಲ್ಲಿಸಿದರು.
ಶನಿವಾರ ಇಲ್ಲಿನ ದಕ್ಷಿಣ ವಿಭಾಗದ ಸಿದ್ದಾಪುರ ಪೊಲೀಸರು, ಠಾಣೆ ವ್ಯಾಪ್ತಿಯ ಸೋಮೇಶ್ವರ ಬಡಾವಣೆ ಸುತ್ತಮುತ್ತ ಡಿಸಿಪಿ ರೋಹಿಣಿ ಕಟೋಚ್ ಅವರ ನೇತೃತ್ವದಲ್ಲಿ ಕೊರೋನ ಸೈನಿಕರ ನೇತೃತ್ವದಲ್ಲಿ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸುವಂತೆ ಜಾಗೃತಿ ಮೂಡಿಸಲು ಪಥ ಸಂಚಲನ ನಡೆಸಿದರು.
ಅನಗತ್ಯವಾಗಿ ಮನೆಯಿಂದ ಹೊರಬರದಂತೆ ಹಾಗೂ ಓಡಾಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೊರೋನ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಇದೇ ವೇಳೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.







