ಜಮ್ಮು-ಕಾಶ್ಮೀರದಲ್ಲಿ ಎನ್‌ಕೌಂಟರ್: ಕರ್ನಲ್, ಮೇಜರ್ ಸಹಿತ ಐವರು ಮೃತ್ಯು

ಶ್ರೀನಗರ, ಮೇ 3: ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಭಯೋತ್ಪಾದಕರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಸೇನೆಯ ಇಬ್ಬರು ಹಿರಿಯ ಅಧಿಕಾರಿಗಳಾದ-ಕರ್ನಲ್ ಹಾಗೂ ಮೇಜರ್ ಸಹಿತ ಐವರು ಭದ್ರತಾ ಸಿಬ್ಬಂದಿಗಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.
ಶ್ರೀನಗರದಿಂದ ಸುಮಾರು 70 ಕಿ.ಮೀ.ದೂರದಲ್ಲಿರುವ ಉತ್ತರ ಕಾಶ್ಮೀರದ ಹಂದ್ವಾರದಲ್ಲಿ ಶನಿವಾರ ಜಮ್ಮು-ಕಾಶ್ಮೀರದ ಪೊಲೀಸರು,ಸಶಸ್ತ್ರ ಪಡೆಗಳು ಜಂಟಿಯಾಗಿ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದವು. ತಂಡವು ಹಲವು ನಾಗರಿಕರನ್ನು ರಕ್ಷಿಸಲು ಯಶಸ್ವಿಯಾಗಿದೆ. ಜಂಟಿ ಕಾರ್ಯಾಚರಣೆಯ ವೇಳೆ ಇಬ್ಬರು ಉಗ್ರರು ಹತರಾಗಿದ್ದಾರೆ.
ಉಗ್ರರ ವಿರುದ್ಧ ಕಾರ್ಯಾಚರಣೆಯ ವೇಳೆ ಕರ್ನಲ್ ಅಶುತೋಷ್ ಶರ್ಮಾ, ಮೇಜರ್ ಅನುಜ್ ಸೂದ್ ಹಾಗೂ ಜಮ್ಮು-ಕಾಶ್ಮೀರದ ಪೊಲೀಸ್‌ನ ಸಬ್-ಇನ್‌ಸ್ಪೆಕ್ಟರ್ ಶಕೀಲ್ ಖಾಝಿ ಸಹಿತ ಐವರು ವೀರರು ಹುತಾತ್ಮರಾಗಿದ್ದಾರೆ ಎಂದು ತಿಳಿಸಲು ಬೇಸರವಾಗುತ್ತಿದೆ ಎಂದು ಪೊಲೀಸ್ ಮಹಾ ನಿರ್ದೇಶಕ ದಿಲ್‌ಬಾಗ್ ಸಿಂಗ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಕುಪ್ವಾರ ಜಿಲ್ಲೆಯ ಹಂದ್ವಾರ ಪ್ರದೇಶದಲ್ಲಿ ಚಾಂಗಿಮುಲ್ಲಾದ ಮನೆಯೊಂದರಲ್ಲಿ ಭಯೋತ್ಪಾದಕರು ನಾಗರಿಕರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ ಎಂಬ ಗುಪ್ತಚರ ಮಾಹಿತಿಯ ಹಿನ್ನೆಲೆಯಲ್ಲಿ ಸೇನೆ ಹಾಗೂ ಜಮ್ಮು-ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದರು. ಉಗ್ರರು ಆಕ್ರಮಿಸಿಕೊಂಡಿದ್ದ ಪ್ರದೇಶವನ್ನು ಪ್ರವೇಶಿಸಿದ ಜಮ್ಮು-ಕಾಶ್ಮೀರದ ಪೊಲೀಸರು ಉಗ್ರರ ಹಿಡಿತದಿಂದ ನಾಗರಿಕರನ್ನು ತೆರವುಗೊಳಿಸಿದ್ದಾರೆ ಎಂದು ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ.
ಘಟನೆಯ ಬಗ್ಗೆ ಪ್ರಕ್ರಿಯಿಸಿದ ಗೃಹ ಸಚಿವ ರಾಜನಾಥ ಸಿಂಗ್ ಮೃತಪಟ್ಟಿರುವ ಯೋಧರು ಹಾಗೂ ಪೊಲೀಸರ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದ್ದಾರೆ.







