ಬ್ಯಾಂಕ್ ನೌಕರ ಒಕ್ಕೂಟದ ಸಾಮಾಜಿಕ ಬದ್ಧತೆ ಶ್ಲಾಘನೀಯ : ದಾವಣಗೆರೆ ಡಿಸಿ

ದಾವಣಗೆರೆ: ಕರ್ನಾಟಕ ಪ್ರದೇಶ್ ಬ್ಯಾಂಕ್ ಎಂಪ್ಲಾಯೀಸ್ ಪೆಡರೇಶನ್, ಬೆಂಗಳೂರು ಮತ್ತು ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘ, ದಾವಣಗೆರೆ ಇವರು ಜಂಟಿಯಾಗಿ ಕೋರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವುದಕ್ಕಾಗಿ ವಿಧಿಸಲಾಗಿರುವ ಲಾಕ್ ಡೌನ್ ಪರಿಸ್ಥಿತಿಯಿಂದ ಆರ್ಥಿಕವಾಗಿ ತೀವ್ರವಾಗಿ ಸಂಕಷ್ಟಕ್ಕೊಳಗಾದ ಕಾರ್ಮಿಕ ವರ್ಗಕ್ಕೆ ಸಹಾಯ ಹಸ್ತ ನೀಡಲು ಆಹಾರದ ಕಿಟ್‌ನ್ನು ಸುಮಾರು 75 ಕಾರ್ಮಿಕರಿಗೆ ವಿತರಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಆಹಾರ ಧಾನ್ಯಗಳ ಕಿಟ್‌ನ್ನು ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಯವರು ಬ್ಯಾಂಕ್ ನೌಕರರು ದೇಶದ ಆರ್ಥಿಕ ಚಟುವಟಿಕೆಗಳನ್ನು ನಿಭಾಯಿಸುವುದರ ಮೂಲಕ ಹಣಕಾಸು ಸೈನಿಕರೆನಿಸಿಕೊಂಡಿದ್ದಾರೆ. ಕೋರೋನ ವೈರಸ್ ಹರಡುವಿಕೆಯಿಂದ ಇಡೀ ವಿಶ್ವವೇ ಭಯಭೀತರಾಗಿರುವ ಈ ಸಂದರ್ಭದಲ್ಲಿ ಬ್ಯಾಂಕ್ ನೌಕರರು ಧೈರ್ಯವಾಗಿ ಕೆಲಸ ಮಾಡಿ ಸರಕಾರದ ಯೋಜನೆಗಳನ್ನು ಗ್ರಾಹಕರಿಗೆ ತಲುಪಿಸುತ್ತಿದ್ದಾರೆ. ಜೊತೆಗೆ ಕರ್ನಾಟಕ ಪ್ರದೇಶ ಬ್ಯಾಂಕ್ ನೌಕರರ ಒಕ್ಕೂಟ ಮತ್ತು ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರ ಸಂಘದವರು ಈ ರೀತಿಯ ಸಾಮಾಜಿಕ ಕಳಕಳಿಯ ಚಟುವಟಿಕೆಗಳನ್ನು ನಡೆಸುವ ಮೂಲಕ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಹನುಮಂತ ರಾಯ, ಕೆನರಾ ಬ್ಯಾಂಕಿನ ಲೀಡ್ ಬ್ಯಾಂಕ್ ವಿಭಾಗೀಯ ಪ್ರಬಂಧಕ ಸುಶೃತ್ ಡಿ. ಶಾಸ್ತ್ರಿ, ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹೆಚ್.ಎಸ್.ಮಂಜುನಾಥ ಕುರ್ಕಿ, ಕಾರ್ಮಿಕ ಮುಖಂಡರಾದ ಹೆಚ್.ಕೆ. ರಾಮಚಂದ್ರಪ್ಪ, ಅವರಗೆರೆ ಹೆಚ್.ಜಿ.ಉಮೇಶ್, ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ವಾಮದೇವಪ್ಪ, ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಬಿ.ಆನಂದ ಮೂರ್ತಿ, ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ, ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಬಿ.ದಿಳ್ಯೆಪ್ಪ, ಎ.ಆರ್.ಉಜ್ಜನಪ್ಪ, ಅಜಿತ್ ಕುಮಾರ್ ನ್ಯಾಮತಿ ಮತ್ತಿತರ ಗಣ್ಯರು ಭಾಗವಹಿಸಿ ಕಾರ್ಮಿಕರಿಗೆ ಆಹಾರದ ಕಿಟ್‌ನ್ನು ವಿತರಿಸಿದರು.
ಸಂಕಷ್ಟದಲ್ಲಿರುವ ಆಟೋ ಚಾಲಕರು, ಕಲಾವಿದರು, ಮನೆಕೆಲಸ ಮಾಡುವವರು, ತಳ್ಳು ಗಾಡಿಯಲ್ಲಿ ಹೋಟೆಲ್ ನಡೆಸುತ್ತಿರುವವರು, ಹೂವು ಮಾರುವವರು, ಸೆಕ್ಯುರಿಟಿ ಸಿಬ್ಬಂದಿ, ಪತ್ರಕರ್ತರು, ಪತ್ರಿಕಾ ವಿತರಕರು, ಕಟ್ಟಡ ಕಾರ್ಮಿಕರು, ಕ್ಷೌರಿಕರು, ಅಂಗವಿಕಲರು, ರಸ್ತೆ ಬದಿ ವ್ಯಾಪಾರಿಗಳು ಮುಂತಾದವರನ್ನು ಆಯ್ಕೆ ಮಾಡಿ ನೆರವು ಅಕ್ಕಿ, ಬೇಳೆ, ಗೋಧಿ ಹಿಟ್ಟು, ಸಕ್ಕರೆ, ಬೆಲ್ಲ, ಎಣ್ಣೆ, ಅವಲಕ್ಕಿ, ರವೆ, ತರಕಾರಿಗಳನ್ನು ಮುಂತಾದ ಅಗತ್ಯ ವಸ್ತುಗಳನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘಟನೆಯ ಪದಾಧಿಕಾರಿಗಳಾದ ಬಿ.ಆನಂದ ಮೂರ್ತಿ, ಕೆ.ರಾಘವೇಂದ್ರ ನಾಯರಿ, ಎಂ.ಟಿ.ರಂಗಪ್ಪ, ಆರ್.ಆಂಜನೇಯ, ವಿಶ್ವನಾಥ ಬಿಲ್ಲವ, ಹೆಚ್.ಎಸ್.ತಿಪ್ಪೇಸ್ವಾಮಿ, ಎಮ್.ಎಮ್.ಸಿದ್ದಲಿಂಗಯ್ಯ, ಕೆ.ರವಿಶಂಕರ್, ಕೆ.ಶಶಿಶೇಖರ, ವಿ.ಆರ್. ಹರೀಶ್, ಸುರೇಶ್ ಚೌಹಾಣ್, ಕೆ.ನಾಗರಾಜ್, ಅಣ್ಣಪ್ಪ ನಂದಾ, ಅಜಯ್ ಕುಮಾರ್, ಆಂಜನೇಯ, ಆರ್.ಸತೀಶ್, ಕೆ.ನಾಗರಾಜ್, ಎಂ.ಎಂ.ಸಿದ್ದವೀರಯ್ಯ ಮಂತಾದವರು ಭಾಗವಹಿಸಿದ್ದರು.







