ಉಡುಪಿ ಜಿಲ್ಲೆಯಲ್ಲಿ ಮೇ 4ರಿಂದ ರೂಟ್ ಸರ್ವೆ: ಡಿಸಿ ಜಗದೀಶ್
ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಅವಕಾಶ

ಉಡುಪಿ, ಮೇ 3: ಹಸಿರು ವಲಯವಾಗಿರುವ ಉಡುಪಿ ಜಿಲ್ಲೆಯಲ್ಲಿ ಕೆಎಸ್ ಆರ್‌ಟಿಸಿ ಬಸ್ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಈ ಕುರಿತು ಅಧಿಕಾರಿಗಳು ಮೇ 4ರಿಂದ ಬಸ್‌ಗಳ ಅವಶ್ಯಕತೆ ಇರುವ ಮಾರ್ಗಗಳ ಬಗ್ಗೆ ರೂಟ್ ಸರ್ವೆ ನಡೆಸಲಿದ್ದಾರೆಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಬಸ್ ಸಂಚಾರ ಆರಂಭಿಸುವ ಕುರಿತು ಈಗಾಗಲೇ ಕೆಎಸ್‌ಆರ್‌ಟಿಸಿ ಅಧಿಕಾರಿ ಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ಸಾರ್ವಜನಿಕರ ಓಡಾಟ ಹೆಚ್ಚಿರುವ ಹಾಗೂ ಬಸ್‌ಗಳ ಅವಶ್ಯಕತೆ ಇರುವ ಮಾರ್ಗಗಳ ಸರ್ವೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ ಎಂದರು.
ಸೆಲೂನ್, ಬ್ಯೂಟಿಪಾರ್ಲರ್‌ಗಳಲ್ಲಿ ತುಂಬಾ ಹತ್ತಿರದಲ್ಲಿ ವ್ಯವಹಾರ ನಡೆಸು ವುದರಿಂದ ಅವುಗಳನ್ನು ಒಂದು ವಾರಗಳ ಕಾಲ ತೆರೆಯುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಅದರ ನಂತರ ಸೆಲೂನ್, ಬ್ಯೂಟಿಪಾರ್ಲರ್‌ಗಳನ್ನು ತೆರೆ ಯಲು ಅವಕಾಶ ನೀಡುವ ಬಗ್ಗೆ ನಿರ್ಧಾರ ಮಾಡಲಾಗಿದೆ ಎಂದು ಅವರು ಹೇಳಿದರು.
ಅಂತರ್ ಜಿಲ್ಲಾ ಓಡಾಟಕ್ಕೂ ಒಂದು ಬಾರಿ ಅವಕಾ ನೀಡಲು ಸರಕಾರ ಆದೇಶ ನೀಡಿದೆ. ವಿದ್ಯಾರ್ಥಿಗಳು, ಪ್ರವಾಸಿಗರು, ವಲಸೆ ಕಾರ್ಮಿಕರು ಸೇರಿ ದಂತೆ ಹೊರ ಜಿಲ್ಲೆಯ ನಾಗರಿಕರು ತಮ್ಮ ತಮ್ಮ ಮನೆಗೆ ಹೋಗಲು ಸರಕಾರ ಈ ಅವಕಾಶ ಮಾಡಿಕೊಟ್ಟಿದೆ. ಅದಕ್ಕಾಗಿ ಒಂದು ಬಾರಿಯ ಪಾಸ್‌ನ್ನು ನೀಡ ಲಾಗುವುದು. ಈ ಪಾಸ್ ಮೂಲಕ ಹೊರಗೆ ಹೋದವರು ಮತ್ತೆ ವಾಪಾಸ್ಸು ಬರಲು ಅವಕಾಶ ಇರುವುದಿಲ್ಲ ಎಂದು ಅವರು ತಿಳಿಸಿದರು.
ಈ ಪಾಸ್‌ಗಳಿಗಾಗಿ ತಹಶೀಲ್ದಾರ್ ಕಚೇರಿಯಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ಆ ಅರ್ಜಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ಆನ್‌ಲೈನ್ ಮೂಲಕ ಕಳುಹಿಸಿಕೊಡ ಲಾಗುತ್ತದೆ. ಈ ಅರ್ಜಿಯ ಸತ್ಯಾಸತ್ಯೆಯನ್ನು ಪರಿಶೀಲನೆ ನಡೆಸಲಾಗುತ್ತದೆ. ಹೊರ ಜಿಲ್ಲೆಯಿಂದ ಬಂದು ಇಲ್ಲಿ ಸಿಕ್ಕಿ ಹಾಕಿಕೊಂಡಿರುವುದು ದೃಢಪಟ್ಟರೆ ಅಂತವರನ್ನು ಕಳುಹಿಸಿಕೊಡಲು ವ್ಯವಸ್ಥೆ ಮಾಡಲಾಗುತ್ತದೆಂದು ಜಿಲ್ಲಾಧಿಕಾರಿ ಹೇಳಿದರು.
‘ಹಸಿರು ವಲಯ ಎಂದು ಮೈಮರೆಯಬೇಡಿ’
ಉಡುಪಿ ಜಿಲ್ಲೆ ಹಸಿರು ವಲಯಕ್ಕೆ ಸೇರ್ಪಡೆಯಾಗಿದೆ ಎಂಬುದಾಗಿ ಯಾರು ಕೂಡ ಮೈಮರೆಯಬಾರದು. ಈಗಾಗಲೇ ಹಸಿರು ವಲಯದಲ್ಲಿದ್ದ ಜಿಲ್ಲೆಗಳು ಏಕಾಏಕಿ ಕೆಂಪು ವಲಯಗಳಾಗಿರುವುದು ನಾವು ನೋಡಿದ್ದೇವೆ. ಆದುದರಿಂದ ಈ ಬಗ್ಗೆ ಎಲ್ಲರು ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾಧಿಕಾರಿ ಜಗದೀಶ್ ಹೇಳಿದರು.
ಹೊರ ರಾಜ್ಯ ಹಾಗೂ ಜಿಲ್ಲೆಯಲ್ಲಿರುವ ಯಾರಿಗಾದರೂ ಕೊರೋನ ವೈರಸ್‌ನ ಲಕ್ಷ್ಮಣಗಳಿದ್ದರೆ ಅಥವಾ ಜ್ವರ, ಶೀತ, ಕೆಮ್ಮುಗಳಿದ್ದರೆ ಅಂತವರು ಯಾವುದೇ ಕಾರಣಕ್ಕೂ ಜಿಲ್ಲೆಗೆ ಬರಬಾರದು. ಆ ಮೂಲಕ ಇಲ್ಲಿಯವರಿಗೆ ತೊಂದರೆ ಕೊಡುವ ಕೆಲಸ ಮಾಡಬಾರದು ಎಂದು ಮನವಿ ಮಾಡಿದ ಡಿಸಿ, ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಬರುವ ಪ್ರತಿಯೊಬ್ಬರನ್ನು ಆರೋಗ್ಯ ತಪಾಸಣೆ ನಡೆಸಿಯೇ ಒಳಗೆ ಬಿಡುವ ಕೆಲಸ ಮಾಡಲಾಗುವುದು ಎಂದರು.







