ಉಡುಪಿ: ಸಂಘಸಂಸ್ಥೆಗಳ ಉಚಿತ ಊಟ ವಿತರಣಾ ಸೇವಾ ಕಾರ್ಯ ಸ್ಥಗಿತ

ಉಡುಪಿ, ಮೇ 3: ಲಾಕ್‌ಡೌನ್‌ನಿಂದಾಗಿ ಹಸಿವಿನಿಂದ ಕಂಗೆಟ್ಟಿದ್ದ ವಲಸೆ ಕಾರ್ಮಿಕರು, ನಿರಾಶ್ರಿತರು ಹಾಗೂ ಭಿಕ್ಷುಕರಿಗೆ ಕಳೆದ ಒಂದೂವರೆ ತಿಂಗಳಿ ನಿಂದ ಉಚಿತ ಊಟದ ನೀಡುತ್ತಿದ್ದ ಹಲವು ಸಂಘಸಂಸ್ಥೆಗಳು ಇಂದಿನಿಂದ ಈ ಸೇವಾ ಕಾರ್ಯವನ್ನು ಕೊನೆಗೊಳಿಸಿದೆ.
ಜಿಲ್ಲೆಯಲ್ಲಿ ಉಳಿದುಕೊಂಡಿದ್ದ ಬಹುತೇಕ ವಲಸೆ ಕಾರ್ಮಿಕರು ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿಸಿದ ಬಸ್‌ಗಳಲ್ಲಿ ತಮ್ಮ ತಮ್ಮ ಊರುಗಳಿಗೆ ತೆರಳಿರುವುದರಿಂದ ಮತ್ತು ಲಾಕ್‌ಡೌನ್ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ ಸಂಘಸಂಸ್ಥೆಗಳು ಉಚಿತ ಊಟ ನೀಡುವ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿದೆ.
ಶ್ರೀಕಡಿಯಾಳಿ ಸಾರ್ವಜನಿಕ ಗಣೇಶೋತ್ಸವ ಮತ್ತು ಆಸರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಾ.25ರಿಂದ 40 ದಿನಗಳ ಕಾಲ ಒಟ್ಟು 1.54ಲಕ್ಷ ಮಂದಿಗೆ ಉಚಿತ ಊಟ ವಿತರಣೆ ಮಾಡಲಾಗಿದೆ. ಅದೇ ರೀತಿ 1830 ಆಹಾರ ಕಿಟ್, 199 ಆಶಾ ಕಾರ್ಯಕರ್ತೆಯರಿಗೆ ಗೌರವ ಧನ, ಅವಕಾಶ ವಂಚಿತ 25 ಮಕ್ಕಳಿಗೆ ಸಹಾಯಧನ, 9 ಮಂದಿ ಅನಾರೋಗ್ಯ ಪೀಡಿತರಿಗೆ ನೆರವು ನೀಡಿದೆ.
ಕರಂಬಳ್ಳಿ ಶ್ರೀವೆಂಕಟರಮಣ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ ವತಿ ಯಿಂದ ಎ.15ರಿಂದ 19 ದಿನಗಳ ಕಾಲ ಒಟ್ಟು 96500 ಮಂದಿಗೆ ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಉಡುಪಿ ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ ವತಿಯಿಂದ ಕಳೆದ 39 ದಿನಗಳಿಂದ 18406 ಮಂದಿಗೆ ಉಚಿತ ಊಟ, 23360 ಆಹಾರ ಕಿಟ್‌ಗಳನ್ನು ಒದಗಿಸಿದೆ.
ಸಮಾಜಸೇವಕ ವಿಶು ಶೆಟ್ಟಿ ಕಳೆದ 42 ದಿನಗಳಲ್ಲಿ ನಗರದ ಆಯಕಟ್ಟಿನ ಪ್ರದೇಶಗಳಲ್ಲಿದ್ದ ಒಟ್ಟು 20 ಸಾವಿರಕ್ಕೂ ಅಧಿಕ ಮಂದಿಗೆ ಊಟದ ವಿತರಣೆ ಮಾಡಲಾಗಿದೆ. ನಗರದ ಸಿಟಿ ಬಸ್ ನಿಲ್ದಾಣದಲ್ಲಿ ರವಿವಾರ ನಡೆದ ಸೇವಾ ಕಾರ್ಯ ಸಮಾಪನ ಕಾರ್ಯಕ್ರಮದಲ್ಲಿ ಮನೋವೈದ್ಯ ಡಾ.ಪಿ.ವಿ.ಭಂಡಾರಿ , ವಲಸೆ ಕಾರ್ಮಿಕರಿಗೆ ಕೊರೊನಾ ಸೋಂಕು ತಡೆಯುವ ಕುರಿತು ಜಾಗೃತಿ ಮೂಡಿಸಿದರು.
ಅದೇ ರೀತಿ ಅನ್ಸಾರ್ ಅಹ್ಮದ್ ಹಾಗೂ ಮುಹಮ್ಮದ್ ಶೀಶ್ ನೇತೃತ್ವದಲ್ಲಿ ಕಳೆದ 39 ದಿನಗಳಿಂದ 60,000 ಮಂದಿ ಕಾರ್ಮಿಕರು, ಭಿಕ್ಷುಕರಿಗೆ ಊಟ ವಿತರಿಸುವ ಕಾರ್ಯ ನಡೆಸಿದ್ದಾರೆ. ಇಂದು ಕೊನೆಯದಾಗಿ ಚಿಕನ್ ಬಿರಿಯಾನಿ ವಿತರಿಸಿ ಧನ್ಯವಾದ ಕಾರ್ಯಕ್ರಮದ ಮೂಲಕ ಈ ಸೇವಾ ಕಾರ್ಯನ್ನು ಕೊನೆಗೊಳಿಸಲಾಯಿತು.







