ಉಡುಪಿ: ರವಿವಾರ ಇನ್ನೂ 8 ಮಂದಿ ಆಸ್ಪತ್ರೆಗೆ ದಾಖಲು
ಉಡುಪಿ, ಮೇ 2: ಶಂಕಿತ ನೋವೆಲ್ ಕೊರೋನ ವೈರಸ್ (ಕೋವಿಡ್- 19) ಸೋಂಕಿನ ಪರೀಕ್ಷೆಗಾಗಿ ರೋಗದ ಲಕ್ಷಣ ಹೊಂದಿರುವ 8 ಮಂದಿ ರವಿವಾರ ಜಿಲ್ಲೆಯ ವಿವಿಧ ಆಸ್ಪತ್ರೆಗಳ ಐಸೋಲೇಶನ್ ವಾರ್ಡಿಗೆ ಸೇರ್ಪಡೆ ಗೊಂಡಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಇಂದು ದಾಖಲಾದವರಲ್ಲಿ ಇಬ್ಬರು ಪುರುಷರು ಹಾಗೂ ಆರು ಮಂದಿ ಮಹಿಳೆಯರಿದ್ದಾರೆ. ಇವರಲ್ಲಿ ಒಬ್ಬರು ಕೋವಿಡ್ ಶಂಕಿತರಾದರೆ, ಆರು ಮಂದಿ ಯಲ್ಲಿ ತೀವ್ರ ತರದ ಉಸಿರಾಟ ತೊಂದರೆ ಕಾಣಿಸಿಕೊಂಡಿದೆ. ಉಳಿದ ಒಬ್ಬರು ಶೀತಜ್ವರದ ಬಾಧೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಮೂವರು ಐಸೋಲೇಷನ್ ವಾರ್ಡಿನಿಂದ ಬಿಡುಗಡೆಗೊಂಡಿದ್ದು, 55 ಮಂದಿ ಇನ್ನೂ ಅದೇ ವಾರ್ಡಿನಲ್ಲಿ ವೈದ್ಯರ ನಿಗಾದಲ್ಲಿದ್ದಾರೆ. ಒಟ್ಟು 359 ಮಂದಿ ಈವರೆಗೆ ಆಸ್ಪತ್ರೆಯ ಐಸೋಲೇಶನ್ ವಾರ್ಡಿನಿಂದ ಬಿಡುಗಡೆಗೊಂಡಿದ್ದಾರೆ ಎಂದು ಡಾ.ಸೂಡ ತಿಳಿಸಿದರು.
ರವಿವಾರ 17 ಮಂದಿಯ ಗಂಟಲು ದ್ರವದ ಮಾದರಿಗಳನ್ನು ಸಂಗ್ರಹಿಸಿ ಕೊರೋನ ಸೋಂಕಿನ ಗುಣಲಕ್ಷಣಗಳಿಗಾಗಿ ರವಿವಾರ ಪರೀಕ್ಷೆಗೆ ಕಳುಹಿಸ ಲಾಗಿದೆ. ಇದರಲ್ಲಿ ಏಳು ಕೋವಿಡ್ ಶಂಕಿತರು, ಮೂರು ತೀವ್ರ ಉಸಿರಾಟದ ತೊಂದರೆಯವರು, ಇಬ್ಬರು ಶೀತಜ್ವರದಿಂದ ಬಳಲುವವರ ಹಾಗೂ ಐದು ಕೊರೋನ ಹಾಟ್‌ಸ್ಪಾಟ್‌ನಿಂದ ಬಂದವರ ಸ್ಯಾಂಪಲ್‌ಗಳು ಸೇರಿವೆ ಎಂದು ಡಾ.ಸೂಡ ತಿಳಿಸಿದರು.
ರವಿವಾರ ನಿನ್ನೆಯವರೆಗೆ ಬಾಕಿ ಉಳಿದಿದ್ದ 50 ಸ್ಯಾಂಪಲ್‌ಗಳಲ್ಲಿ ಯಾವುದರ ವರದಿಯೂ ಬಂದಿಲ್ಲ. ಹೀಗಾಗಿ ಇಂದಿನ 17 ಸ್ಯಾಂಪಲ್‌ಗಳು ಸೇರಿದಂತೆ ಒಟ್ಟು 67ರ ವರದಿಗಳು ಬರಲು ಬಾಕಿ ಇವೆ ಎಂದ ಡಾ.ಸೂಡ, ಈ ಮೂಲಕ ರವಿವಾರದವರೆಗೆ ಜಿಲ್ಲೆಯಿಂದ ಕಳುಹಿಸಿದ ಒಟ್ಟು 1194 ಮಂದಿಯ ಸ್ಯಾಂಪಲ್‌ಗಳಲ್ಲಿ 1127ರ ವರದಿ ಬಂದಿದ್ದು, 1124 ನೆಗೆಟಿವ್ ಹಾಗೂ ಮೂರು ಪಾಸಿಟಿವ್ ಆಗಿ ಬಂದಿವೆ ಎಂದರು.
ಜಿಲ್ಲೆಯಲ್ಲಿ ಕೋವಿಡ್-19ರ ವಿವಿಧ ಹಿನ್ನೆಲೆಯಲ್ಲಿ ಇಂದು 81 ಮಂದಿ ಯನ್ನು ಹೊಸದಾಗಿ ನೋಂದಣಿ ಮಾಡಿಕೊಳ್ಳಲಾಗಿದೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಒಟ್ಟು 3733 ಮಂದಿಯನ್ನು ತಪಾಸಣೆಗಾಗಿ ನೋಂದಣಿ ಮಾಡಿ ಕೊಂಡಂತಾಗಿದೆ. ಇವರಲ್ಲಿ 2350 (ಇಂದು 37) ಮಂದಿ 28 ದಿನಗಳ ನಿಗಾವನ್ನೂ, 3186 (68) ಮಂದಿ 14 ದಿನಗಳ ನಿಗಾವನ್ನು ಪೂರ್ಣ ಗೊಳಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 446 ಮಂದಿ ಇನ್ನೂ ಹೋಮ್ ಕ್ವಾರಂಟೈನ್ ಹಾಗೂ 46 ಮಂದಿ ಆಸ್ಪತ್ರೆ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದರು.
ಶಿರೂರು ವ್ಯಕ್ತಿಯ ವರದಿ ಬಂದಿಲ್ಲ: ಶುಕ್ರವಾರ ಮುಂಜಾನೆ ಬೆಳಗಾವಿಯಿಂದ 10 ಮಂದಿ ಸ್ನೇಹಿತರೊಂದಿಗೆ ಬೈಂದೂರಿಗೆ ಮರಳಿ ಬಂದು ಕೊರೋನ ಪಾಸಿಟಿವ್ ವದಂತಿಗೆ ಕಾರಣರಾಗಿದ್ದ ಶಿರೂರಿನ ವ್ಯಕ್ತಿಯ ಗಂಟಲು ದ್ರವದ ಮಾದರಿಯ ವರದಿ ಇಂದು ಬಂದಿಲ್ಲ. ಹೀಗಾಗಿ ಅವರೀಗಲೂ ಕುಂದಾಪುರ ಖಾಸಗಿ ಆಸ್ಪತ್ರೆಯ ಐಸೋಲೇಶನ್ ವಾರ್ಡಿನಲ್ಲಿದ್ದು, ಅವರ 9 ಮಂದಿ ಜೊತೆಗಾರರು ಕುಂದಾಪುರ ಮತ್ತು ಉಡುಪಿಯಲ್ಲಿ ಕ್ವಾರಂಟೈನ್‌ನಲ್ಲಿ ಮುಂದು ವರಿದಿದ್ದಾರೆ ಎಂದು ಡಿಎಚ್‌ಓ ತಿಳಿಸಿದರು.







