ದ.ಕ ಜಿಲ್ಲಾಡಳಿತಕ್ಕೆ ಗಂಟಲದ್ರವ ಸಂಗ್ರಹ ಮೊಬೈಲ್ ವಾಹನ ಹಸ್ತಾಂತರ

ಮಂಗಳೂರು, ಮೇ 3: ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ.ವೈ ಭರತ್ ಶೆಟ್ಟಿ ಕೊಡುಗೆಯಾಗಿ ನೀಡಿದ ಗಂಟಲದ್ರವ ಸಂಗ್ರಹ ಮೊಬೈಲ್ ನೂತನ ವಾಹನವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್ ಅವರ ಉಪಸ್ಥಿತಿಯಲ್ಲಿ ಜಿಲ್ಲಾಡಳಿತಕ್ಕೆ ರವಿವಾರ ಹಸ್ತಾಂತರಿಸಲಾಯಿತು.
ಈ ಸಂದರ್ಭ ಮಾತನಾಡಿದ ಶಾಸಕ ಡಾ.ವೈ ಭರತ್ ಶೆಟ್ಟಿ ಮುಂದಿನ ದಿನಗಳಲ್ಲಿ ಈ ಸ್ಯಾಂಪಲ್ ಕಲೆಕ್ಷನ್ ಯುನಿಟ್ ಜಿಲ್ಲೆಯ ವಿವಿಧ ಭಾಗಗಳಿಗೆ ತೆರಳಿ ಗಂಟಲದ್ರವ ಸಂಗ್ರಹ ಮಾಡಲಿದೆ. ಈಗ ಬಳಸಲಾಗುತ್ತಿರುವ ಪಿಪಿಇ ಕಿಟ್ ದುಬಾರಿಯಾಗಿರುವುದರಿಂದ ಹೆಚ್ಚೆಚ್ಚು ಜನರ ಗಂಟಲದ್ರವದ ಸ್ಯಾಂಪಲ್ ಸಂಗ್ರಹಿಸುವ ನಿಟ್ಟಿನಲ್ಲಿ ಇಂತಹ ವ್ಯವಸ್ಥೆ ಅತ್ಯಗತ್ಯವಾಗಿತ್ತು. ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ನೆರವಿನಿಂದ ಈ ವಾಹನವನ್ನು ವಿಶೇಷವಾಗಿ ತಯಾರಿಸಲಾಗಿದೆ. ಈ ವಾಹನದಲ್ಲಿ ಉತ್ತಮ ವ್ಯವಸ್ಥೆ ಇದ್ದು ಗಂಟಲದ್ರವ ಸಂಗ್ರಹಕ್ಕೆ ಅನುಕೂಲವಾಗುವಂತೆ ವಾಹನವನ್ನು ಸಿದ್ಧಗೊಳಿಸಲಾಗಿದೆ ಎಂದರು.
ಶಾಸಕ ಡಿ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಅಪರ ಜಿಲ್ಲಾಧಿಕಾರಿ ರೂಪಾ, ನಿರ್ಮಿತಿ ಕೇಂದ್ರದ ಹಿರಿಯ ನಿರ್ದೇಶಕ ರಾಜೇಂದ್ರ ಕಲ್ಬಾವಿ, ಮಂಗಳೂರು ಉತ್ತರ ಬಿಜೆಒಪಿ ಅಧ್ಯಕ್ಷ ತಿಲಕರಾಜ್ ಕೃಷ್ಣಾಪುರ, ಬಿಜೆಪಿ ಪ್ರಮುಖರಾದ ಸಂದೀಪ್ ಪಚ್ಚನಾಡಿ, ರಾಜೇಶ್ ಕೊಟ್ಟಾರಿ, ಜಗದೀಶ್ ಶೇಣವ ಮತ್ತಿತ್ತರರು ಉಪಸ್ಥಿತರಿದ್ದರು.





