ಬೆಂಗರೆ ಫೆರಿ ಸರ್ವಿಸ್, ಪ್ರಯಾಣ ದೋಣಿಗಳ ತಡೆ ತೆರವುಗೊಳಿಸಲು ಆಗ್ರಹ
ಮಂಗಳೂರು, ಮೇ 3 : ಕೋವಿಡ್ 19-ನಿಗ್ರಹ ಕ್ರಮಗಳ ಜಾರಿಯಾದ ಹಿನ್ನೆಲೆಯಲ್ಲಿ ನಗರದ ಬೆಂಗರೆ ಫೆರಿ ಮತ್ತು ಪ್ರಯಾಣ ದೋಣಿಗಳ ಸಂಚಾರ ನಿರ್ಬಂಧಿಸಿರುವುದರಿಂದ ಹಳೆಬಂದರು ಸಗಟು ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಹಾಗಾಗಿ ಈ ದೋಣಿಗಳ ಪ್ರಯಾಣ ತಡೆಯನ್ನು ತೆರವುಗೊಳಿಸಲು ಬಂದರು ಶ್ರಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಬಿಕೆ ಇಮ್ತಿಯಾಝ್ ಆಗ್ರಹಿಸಿದ್ದಾರೆ.
ಹಳೆಬಂದರು ಸಗಟು ಮಾರುಕಟ್ಟೆಯಲ್ಲಿ ಆಹಾರ ವಸ್ತುಗಳ ಲೋಡಿಂಗ್ ಮತ್ತು ಅನ್‌ಲೋಡಿಂಗ್ ಕೆಲಸಕ್ಕೆ ಬರುವ ಹೆಚ್ಚಿನ ಕಾರ್ಮಿಕರು ಬೆಂಗರೆ ಪ್ರದೇಶದವರಾಗಿದ್ದಾರೆ. ಜಿಲ್ಲಾಡಳಿತ ಮೀನುಗಾರಿಕೆಗೆ ಅನುಮತಿ ನೀಡಿದ್ದು, ಕಸಬಾ ಮತ್ತು ತೋಟ ಬೆಂಗರೆಯ ಮೀನುಗಾರರಿಗೂ ಫೆರಿ ಸೇವೆ ಸ್ಥಗಿತಗೊಳಿಸಿರುವುದರಿಂದ ತೊಂದರೆ ಆಗಿದೆ. ಬೆಂಗರೆಯಲ್ಲಿ ಇದುವರೆಗೂ ಯಾವುದೇ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಬೆಂಗರೆಯ ಫೆರಿ ಸೇವೆಯನ್ನು ನೀಡಲು ಬೆಳಗ್ಗೆ 7ರಿಂದ 12ರ ತನಕ ಅವಕಾಶ ಕಲ್ಪಿಸಬೇಕು. ಬೆಂಗರೆಯಿಂದ ಬಂದರಿಗೆ ಕೆಲಸಕ್ಕೆ ಮತ್ತು ವಸ್ತುಗಳ ಖರೀದಿಗೆ ಬರುವವರಿಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ.





