ಕೊರೋನ ವೈರಸ್: “ಬೊಜ್ಜು ಹೊಂದಿರುವವರ ಜೀವ ಅಪಾಯದಲ್ಲಿ”
ಬ್ರಿಟನ್‌ನ ಭಾರತ ಮೂಲದ ವೈದ್ಯ ಎಚ್ಚರಿಕೆ

ಲಂಡನ್, ಮೇ 3: ಕೊರೋನ ವೈರಸ್‌ನಿಂದಾಗಿ ಸಂಭವಿಸುವ ಸಾವುಗಳಿಗೆ ಕಳಪೆ ಆಹಾರವು ಪ್ರಮುಖ ಕಾರಣವಾಗಿದೆ ಹಾಗೂ ಮಾರಕ ವೈರಸ್ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೊಂದಲು ಭಾರತೀಯರು ತುರ್ತಾಗಿ ಅತಿ ಹೆಚ್ಚು ಸಂಸ್ಕರಿತ ಆಹಾರವನ್ನು ತೊರೆಯಬೇಕು ಎಂದು ಬ್ರಿಟನ್‌ನಲ್ಲಿರುವ ಭಾರತ ಮೂಲದ ಹೃದಯ ತಜ್ಞ ಡಾ. ಅಸೀಮ್ ಮಲ್ಹೋತ್ರಾ ಎಚ್ಚರಿಸಿದ್ದಾರೆ.
ಬೊಜ್ಜು ಮತ್ತು ಅಧಿಕ ದೇಹ ತೂಕವು ಅತ್ಯಂತ ಮಾರಕವಾಗಿದೆ ಹಾಗೂ ಹೆಚ್ಚಿನ ಕೊರೋನ ವೈರಸ್ ಸಾವುಗಳಿಗೆ ಅದೇ ಪ್ರಮುಖ ಕಾರಣವಾಗಿದೆ. ಹಾಗಾಗಿ ಅದನ್ನು ನಿವಾರಿಸಬೇಕಾಗಿದೆ ಎಂದು ಬ್ರಿಟನ್‌ನ ನ್ಯಾಶನಲ್ ಹೆಲ್ತ್ ಸರ್ವಿಸ್ (ಎನ್‌ಎಚ್‌ಎಸ್)ನ ಮುಂಚೂಣಿಯ ವೈದ್ಯರಲ್ಲಿ ಒಬ್ಬರಾಗಿರುವ ಡಾ. ಮಲ್ಹೋತ್ರಾ ಹೇಳಿದರು. ಅವರು ಎವಿಡೆನ್ಸ್ ಬೇಸ್ಡ್ ಮೆಡಿಸಿನ್‌ನ ಪ್ರೊಫೆಸರ್ ಕೂಡ ಆಗಿದ್ದಾರೆ.
ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಗಳು ವಿಜೃಂಭಿಸುತ್ತಿರುವ ಭಾರತದಲ್ಲಿ ಜನರು ಕೊರೋನ ವೈರಸ್‌ಗೆ ಸುಲಭವಾಗಿ ಬಲಿಬೀಳಬಹುದು ಎಂದು 42 ವರ್ಷದ ವೈದ್ಯ ಹೇಳಿದ್ದಾರೆ.
ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಕೊರೋನ ವೈರಸ್ ವಿರುದ್ಧದ ಹೋರಾಟದಲ್ಲಿ ಪ್ರಧಾನ ಅಸ್ತ್ರವಾಗುತ್ತದೆ ಎಂಬ ತಿಳುವಳಿಕೆಯನ್ನು ಜನರಲ್ಲಿ ಹುಟ್ಟಿಸುವ ಅಭಿಯಾನದಲ್ಲಿ ಅವರೀಗ ತೊಡಗಿಕೊಂಡಿದ್ದಾರೆ.
ಮುಖ್ಯವಾಗಿ, ಟೈಪ್ 2 ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದಯದ ಕಾಯಿಲೆ ಕೊರೋನ ವೈರಸ್‌ನಿಂದಾಗಿ ಸಂಭವಿಸುವ ಸಾವುಗಳ ಹಿಂದಿನ ಪ್ರಮುಖ ಕಾರಣಗಳಾಗಿವೆ. ಈ ಕಾಯಿಲೆಗಳಿಗೆಲ್ಲ ದೇಹದಲ್ಲಿ ಅಧಿಕ ಪ್ರಮಾಣದಲ್ಲಿ ಶೇಖರಗೊಳ್ಳುವ ಬೊಜ್ಜೇ ಕಾರಣ ಎಂದು ಅವರು ಹೇಳಿದ್ದಾರೆ.
ಪಾಶ್ಚಿಮಾತ್ಯ ದೇಶಗಳಾದ ಅಮೆರಿಕ ಮತ್ತು ಬ್ರಿಟನ್‌ಗಳಲ್ಲಿ ಕೊರೋನ ವೈರಸ್‌ನಿಂದಾಗಿ ಭಾರೀ ಪ್ರಮಾಣದ ಸಾವುಗಳು ಸಂಭವಿಸಿವೆ. ಆ ದೇಶಗಳ ಜನರ ಅನಾರೋಗ್ಯಯುತ ಜೀವನಶೈಲಿಯೇ ಭಾರೀ ಪ್ರಮಾಣದ ಕೊರೋನ ವೈರಸ್ ಸಾವುಗಳಿಗೆ ಪ್ರಮುಖ ಕಾರಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.







