ತೀವ್ರ ವಿರೋಧದ ನಡುವೆಯೂ ನಾಳೆಯಿಂದ ಬೆಂಗಳೂರಿನಲ್ಲಿ ಮದ್ಯ ಮಾರಾಟ ಆರಂಭ

ಬೆಂಗಳೂರು, ಮೇ 3: ಲಾಕ್‍ಡೌನ್ ಸಂದರ್ಭದಲ್ಲಿ ರಾಜ್ಯ ಸರಕಾರ ಮದ್ಯ ಮಾರಾಟಕ್ಕೆ ಅವಕಾಶ ನೀಡಬಾರದೆಂದು ವಿವಿಧ ಕ್ಷೇತ್ರದ ಗಣ್ಯರ ಒತ್ತಾಯವಿದ್ದರೂ, ನಾಳೆಯಿಂದ(ಮೇ 4) ರಾಜಧಾನಿ ಬೆಂಗಳೂರಿನಲ್ಲಿಯೇ ಮದ್ಯದಂಗಡಿ ಆರಂಭಕ್ಕೆ ಅನುಮತಿ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರು ವ್ಯಾಪ್ತಿಯಲ್ಲಿನ ಕಂಟೈನ್‍ಮೆಂಟ್ ಝೋನ್‍ಗಳನ್ನು ಹೊರತುಪಡಿಸಿ ಕೆಲ ಸ್ಥಳಗಳಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಸರಕಾರ ನಿಗಪಡಿಸಿದ ಸಮಯದವರೆಗೆ ಅಂದರೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮಾತ್ರ ತೆರೆದಿರಬೇಕು. ಮದ್ಯ ಅಂಗಡಿಗಳಲ್ಲಿ ಮಾಸ್ಕ್ ಧರಿಸಿರಬೇಕು. ಕೈಗೆ ಗ್ಲೌಸ್ ಹಾಕಿ, ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಸಿಸಿಟಿವಿ ಹಾಗೂ ವೈಯಕ್ತಿಕ ಕಾವಲುಗಾರನನ್ನು ನೇಮಿಸಿರಬೇಕು.
ಅನಗತ್ಯವಾಗಿ ಸಾರ್ವಜನಿಕರು ಗುಂಪು ಸೇರುವುದು ಹಾಗೂ ನಿಷೇಧಾಜ್ಞೆ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಅಂತವರ ವಿರುದ್ಧ ಐಪಿಸಿ ಸೆಕ್ಷನ್ 188 ಎನ್‍ಡಿಎಂಎ ಕಾಯ್ದೆಯಡಿ ಅನ್ವಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಇಲಾಖೆ ಪ್ರಕಟನೆ ಹೊರಡಿಸಿದೆ. ಆದರೆ, ಸರಕಾರದ ಈ ನಡೆಗೆ ಮಹಿಳಾ ಸಂಘಟನೆಗಳು ಸೇರಿದಂತೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಪಾಪದ ಹಣ ಬೇಡ: ಮದ್ಯ ಮಾರಾಟ ಬೇಡವೆಂದು ಇಡೀ ಸಮಾಜ, ವೈದ್ಯರು, ವಿಜ್ಞಾನಿಗಳು, ಮಠಾಧೀಶರು ಹಾಗೂ ಸ್ತ್ರೀವರ್ಗವೇ ಹೇಳಿದೆ. ಆದರೆ, ರಾಜ್ಯ ಸರಕಾರ ಈ ಪಾಪದ ಹಣ ಗಳಿಕೆಗೆ ಮುಂದಾಗಿದೆ. ಅಲ್ಲದೆ, ಸರಕಾರದ ಬೊಕ್ಕಸ ತುಂಬಿದರೆ, ಬಡವರಿಗೆ ಆಗುವ ಪ್ರಯೋಜನವೇ ಇಲ್ಲ. ಇದರಿಂದ ಬಡವರ ಕಲ್ಯಾಣ ಆಗಲಿದೆ ಎನ್ನುವ ಮಾತು ಸುಳ್ಳು ಎಂದು ರಂಗಕರ್ಮಿ ಪ್ರಸನ್ನ ಹೆಗ್ಗೋಡು ತಿಳಿಸಿದರು.
ಆಕ್ರೋಶ: ರಾಜ್ಯ ಸರಕಾರದ ಕ್ರಮ ವಿರೋಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಮದ್ಯ ನಿಷೇಧ ಬೃಹತ್ ಆಂದೋಲನ ಆರಂಭವಾಗಿದ್ದು, ಲಾಕ್‍ಡೌನ್ ಪರಿಣಾಮದಿಂದ ಶಾಶ್ವತವಾಗಿ ಮದ್ಯ ಮಾರಾಟ ನಿಷೇಧವಾಗಲಿದೆ ಎಂದು ಹಲವು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.







