ಕಾರ್ಮಿಕರ ಆರೋಗ್ಯದ ವಿಚಾರದಲ್ಲಿ ಸರಕಾರದ ಚೆಲ್ಲಾಟ: ಕುಮಾರಸ್ವಾಮಿ ಆರೋಪ

ಬೆಂಗಳೂರು, ಮೇ. 3: 'ಇಷ್ಟು ದಿನ ಸಾವಿರಾರು ಕೋಟಿ ರೂಪಾಯಿಗಳನ್ನು ನಷ್ಟ ಮಾಡಿಕೊಂಡು ಪಾಲಿಸಲಾದ ಲಾಕ್‍ಡೌನ್‍ನಿಂದ ಗಳಿಸಿಕೊಂಡಿದ್ದನ್ನು ಸರಕಾರ ಒಂದು ಅವೈಜ್ಞಾನಿಕ ನಡೆಯಿಂದ ಕಳೆದುಕೊಳ್ಳಬಾರದು. ಕಾರ್ಮಿಕರು ಮತ್ತು ಹಳ್ಳಿಗಳು ಸೌಖ್ಯವಾಗಿರಬೇಕು. ಈ ನಿಟ್ಟಿನಲ್ಲಿ ಸರಕಾರ ಎಲ್ಲ ರೀತಿಯ ಮುನ್ನಚ್ಚರಿಕಾ ಕ್ರಮಗಳ್ನು ಕೈಗೊಳ್ಳಬೇಕು' ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಲಹೆ ಮಾಡಿದ್ದಾರೆ.
ರವಿವಾರ ಸರಣಿ ಟ್ವೀಟ್ ಮಾಡಿರುವ ಅವರು, ಕಾರ್ಮಿಕರು ಊರುಗಳಿಗೆ ತಲುಪಿಸುವುದು ಆಗಬೇಕಾದ ಕಾರ್ಯವೇ. ಆದರೆ, ಈ ಕಾರ್ಯದಲ್ಲಿ ಅವರ ಆರೋಗ್ಯಕ್ಕೆ ಅಪಾಯ ಎದುರಾಗಬಾರದು. ಅವರ ಹಿತಕ್ಕಾಗಿ ಕೈಗೊಂಡ ಈ ನಿರ್ಧಾರವೇ ಅವರಿಗೆ ಸಂಚಕಾರವಾಗಿ ಪರಿಣಮಿಸಬಾರದು. ಬಸ್‍ಗಳಲ್ಲೂ ದೈಹಿಕ ಅಂತರ ಪಾಲನೆಯಾಗಲಿ. ಸೂಕ್ತ ರೀತಿಯ ಪರೀಕ್ಷೆ ನಡೆಯಲಿ' ಎಂದು ಆಗ್ರಹಿಸಿದ್ದಾರೆ.
ವಿದೇಶದಿಂದ ಸೋಂಕು ಹೊತ್ತು ಬರುವವರನ್ನೆಲ್ಲ ಬರಮಾಡಿಕೊಂಡ ಸರಕಾರ ಕೊನೆಗೆ ಪೂರ್ವ ಸಿದ್ಧತೆಗಳಿಲ್ಲದೆ, ಜನರಿಗೆ ಮಾಹಿತಿ ನೀಡಿದೇ ಲಾಕ್‍ಡೌನ್ ಜಾರಿ ಮಾಡಿತು. ಜನರೂ ಸರಕಾರದ ನಿರ್ಧಾರವನ್ನು ಪಾಲಿಸಿದ್ದಾರೆ. ಹೀಗಾಗಿ ದೇಶ ಮತ್ತು ರಾಜ್ಯದಲ್ಲಿ ಕೋವಿಡ್ ಸಂಪೂರ್ಣ ನೀಗದೇ ಹೋದರೂ ಸಂಭವಿಸಬಹುದಾಗಿದ್ದ ದೊಡ್ಡ ಪ್ರಮಾದ ತಪ್ಪಿದೆ' ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಪೂರ್ವ ಸಿದ್ಧತೆಗಳಿಲ್ಲದೇ ಜಾರಿ ಮಾಡಲಾದ ಲಾಕ್‍ಡೌನ್‍ಅನ್ನು ಈಗ ಮುನ್ನಚ್ಚರಿಕೆ ಇಲ್ಲದೇ ಸಡಿಸ ಮಾಡಲಾಗಿದೆ. ವಲಸೆ ಕಾರ್ಮಿಕರು ಊರಿಗೆ ಹೋಗಲು ಅವಕಾಶ ಮಾಡಿಕೊಟ್ಟಿರುವ ರಾಜ್ಯ ಸರಕಾರ ಜನರು ಭಾರಿ ಪ್ರಮಾಣದಲ್ಲಿ ಗುಂಪುಗೂಡುವಂತೆ ಮಾಡಿದೆ. ಈ ಮೂಲಕ ಕಾರ್ಮಿಕರ ಆರೋಗ್ಯದ ವಿಚಾರದಲ್ಲಿ ಚೆಲ್ಲಾಟವಾಡುತ್ತಿದೆ' ಎಂದು ಕುಮಾರಸ್ವಾಮಿ ದೂರಿದ್ದಾರೆ.







