ಕಿರು, ಸಣ್ಣ, ಮಧ್ಯಮ ಉದ್ಯಮ ಕ್ಷೇತ್ರಕ್ಕೆ ಶೀಘ್ರ ಪರಿಹಾರ ಪ್ಯಾಕೇಜ್: ಗಡ್ಕರಿ
ಹೊಸದಿಲ್ಲಿ,ಮೇ 3: ಕೋವಿಡ್-19 ಲಾಕ್‌ಡೌನ್‌ನಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಕಿರು,ಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್‌ಎಂಇ)ಗಳ ಕ್ಷೇತ್ರಕ್ಕೆ ಪರಿಹಾರ ಪ್ಯಾಕೇಜೊಂದನ್ನು ಸರಕಾರವು ಅಂತಿಮಗೊಳಿಸುತ್ತಿದೆ.
ಎಂಎಸ್‌ಎಂಇ ಸಚಿವಾಲಯವು ಈ ಕ್ಷೇತ್ರದ ಪುನಃಶ್ಚೇತನಕ್ಕೆ ಅಗತ್ಯ ಕ್ರಮಗಳ ಪಟ್ಟಿಯೊಂದನ್ನು ವಿತ್ತ ಸಚಿವಾಲಯಕ್ಕೆ ಕಳುಹಿಸಿದೆ. ಫಿಕ್ಕಿ ಮಹಿಳಾ ಸಂಘಟನೆಗಳು ಆಯೋಜಿಸಿದ್ದ ವೆಬಿನಾರ್‌ನಲ್ಲಿ ಮಾತನಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು,ಪರಿಹಾರ ಪ್ಯಾಕೇಜ್‌ಗಾಗಿ ಶಿಫಾರಸುಗಳನ್ನು ವಿತ್ತ ಸಚಿವೆ ಮತ್ತು ಪ್ರಧಾನ ಮಂತ್ರಿಗಳಿಗೆ ಸಲ್ಲಿಸಲಾಗಿದೆ. ಪ್ಯಾಕೇಜ್ ಶೀಘ್ರವೇ ಪ್ರಕಟಗೊಳ್ಳುವ ನಿರೀಕ್ಷೆಯಿದೆ. ಸಾಧ್ಯವಿರುವಷ್ಟು ಗರಿಷ್ಠ ಪ್ರಮಾಣದಲ್ಲಿ ಪರಿಹಾರವನ್ನೊದಗಿಸಲು ನಾವು ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು. ಗಡ್ಕರಿ ಎಂಎಸ್‌ಎಂಇ ಹೊಣೆಗಾರಿಕೆಯನ್ನೂ ನಿಭಾಯಿಸುತ್ತಿದ್ದಾರೆ.
ಎಂಎಸ್‌ಎಂಇ ಸಚಿವಾಲಯವು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ನಗದು ಹರಿವನ್ನು ಹೆಚ್ಚಿಸಲು ಹೊಸ ಕ್ರಮಗಳ ಬಗ್ಗೆ ಒಲವು ಹೊಂದಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆಗಳನ್ನು ನಡೆಸಿದ ಸಂದರ್ಭದಲ್ಲಿ ಎಂಎಸ್‌ಎಂಇ ಮತ್ತು ರೈತರನ್ನು ಬೆಂಬಲಿಸಲು,ನಗದು ಹರಿವನ್ನು ಹೆಚ್ಚಿಸಲು ಮತ್ತು ಸಾಲಗಳ ಹೆಚ್ಚಿನ ಲಭ್ಯತೆಗಾಗಿ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಿದ್ದರು.
ಎಂಎಸ್‌ಎಂಇ ಕ್ಷೇತ್ರಕ್ಕೆ ಸಾಲ ಸೌಲಭ್ಯವನ್ನು ಹೆಚ್ಚಿಸಲು ಸಾಲ ಖಾತರಿ ಯೋಜನೆಯ ಮಿತಿಯನ್ನು ಹೆಚ್ಚಿಸುವ ಬಗ್ಗೆಯೂ ಸಚಿವಾಲಯವು ಒಲವು ಹೊಂದಿದೆ. ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮೇಲಿನ ಹಣಕಾಸು ಹೊರೆಯನ್ನು ಕಡಿಮೆ ಮಾಡಲು ಅವುಗಳಿಗೆ ತೆರಿಗೆ ಪರಿಹಾರ ನೀಡಬೇಕೆಂದೂ ಸಚಿವಾಲಯವು ಬಯಸಿದೆ. ಎಲ್ಲ ಸರಕಾರಿ ಇಲಾಖೆಗಳು ಮತ್ತು ಸಾರ್ವಜನಿಕ ಕ್ಷೇತ್ರದ ಉದ್ಯಮಗಳು ಎಂಎಸ್‌ಎಂಇಗೆ ಬಾಕಿಯಿರುವ ಎಲ್ಲ ಮೊತ್ತಗಳನ್ನು ಬಡ್ಡಿಸಹಿತ ಪಾವತಿಸಬೇಕು ಎಂದೂ ಸಚಿವಾಲಯವು ಸೂಚಿಸಿದೆ.