ಕಲಬುರಗಿ: ಲಾಕ್ಡೌನ್ ನಡುವೆ ಕುಟುಂಬಕ್ಕೆ ಮತ್ತೊಂದು ಬರೆ; ತಾಳಿ ಮಾರಿ ಪತಿಗೆ ಚಿಕಿತ್ಸೆ ಕೊಡಿಸುತ್ತಿರುವ ಪತ್ನಿ

ಸಾಂದರ್ಭಿಕ ಚಿತ್ರ
ಕಲಬುರಗಿ, ಮೇ 3: ಕೊರೋನ ವೈರಸ್ ಸೋಂಕು ಹರಡುವಿಕೆ ತಡೆಗಟ್ಟಲು ಲಾಕ್ಡೌನ್ ಜಾರಿಯಿಂದಾಗಿ ಜನರು ಊಟ ಹಾಗೂ ಕೆಲಸವಿಲ್ಲದೆ ಈಗಾಗಲೇ ಕಂಗೆಟ್ಟು ಹೋಗಿದ್ದಾರೆ. ಇದರ ಮಧ್ಯೆಯೇ ಕೊರೋನದಿಂದ ಕಂಗೆಟ್ಟಿದ್ದ ಕಲಬುರಗಿ ನಗರದ ಬ್ರಹ್ಮಪುರ ಬಡಾವಣೆಯಲ್ಲಿರುವ ಕುಟುಂಬವೊಂದರ ಯಜಮಾನ ಹೃದಯಾಘಾತಕ್ಕೆ ಒಳಗಾಗಿದ್ದು, ಪತ್ನಿಯು ತನ್ನ ತಾಳಿಯನ್ನು ಮಾರಿ ಪತಿಗೆ ಚಿಕಿತ್ಸೆ ಕೊಡಿಸುತ್ತಿದ್ದಾಳೆ ಎಂದು ತಿಳಿದುಬಂದಿದೆ.
ಹಾಸಿಗೆ ಹಿಡಿದಿರುವ ನಾಗರಾಜ್ ಗುತ್ತೇದಾರ್ ಈ ಮೊದಲು ವೈನ್ಶಾಪ್ನಲ್ಲಿ ಕೆಲಸ ಮಾಡುತ್ತಿದ್ದರು. ಕೆಲವು ತಿಂಗಳ ಹಿಂದೆ ನಾಗರಾಜ್ಗೆ ಹೃದಯಾಘಾತವಾಗಿದೆ. ಹೃದಯಾಘಾತದ ಜೊತೆಗೆ ಬಿಪಿ, ಶುಗರ್ ಕೂಡಾ ಇದೆ. ಹೀಗಾಗಿ, ಬಿಪಿ ಮಾತ್ರೆ ಜೊತೆಗೆ ಶುಗರ್ ಗೆ ಇನ್ಸುಲಿನ್ ಬೇಕು. ಹೃದಯಾಘಾತವಾಗಿದ್ದರಿಂದ ಅದಕ್ಕೂ ಮಾತ್ರೆಗಳು ಬೇಕು. ಆದರೆ, ಇದೀಗ ಮಾತ್ರೆಯನ್ನೂ ಖರೀದಿ ಮಾಡಲು ಆಗದ ಸ್ಥಿತಿಗೆ ನಾಗರಾಜ್ ಮತ್ತು ಈತನ ಕುಟುಂಬಸ್ಥರು ಬಂದಿದ್ದಾರೆ.
ನಾಗರಾಜ್ಗೆ ಮೂವರು ಮಕ್ಕಳಿದ್ದಾರೆ. ಇವರೆಲ್ಲರೂ ಇನ್ನು ಓದುತ್ತಿದ್ದಾರೆ. ಹೀಗಾಗಿ, ಗಂಡನ ಮೇಲೆ ಇದ್ದ ಜವಾಬ್ದಾರಿ ಈಗ ನಾಗರಾಜ್ ಪತ್ನಿ ಮೇಲೆ ಬಿದ್ದಿದೆ. ಗಂಡನಿಗೆ ಮಾತ್ರೆ, ಮಕ್ಕಳ ಓದು, ಜೊತೆಗೆ ಮನೆಯವರ ಹೊಟ್ಟೆ ತುಂಬಿಸಲು ಒದ್ದಾಡಬೇಕಾಗಿದೆ. ಆದರೆ, ಲಾಕ್ಡೌನ್ನಿಂದಾಗಿ ಈಗ ಎಲ್ಲೂ ಕೆಲಸ ಸಿಗುತ್ತಿಲ್ಲ. ಹಣ ಕೂಡ ಇಲ್ಲ. ಇದರಿಂದಾಗಿ ಕುಟುಂಬ ಮತ್ತಷ್ಟು ಸಂಕಷ್ಟಕ್ಕೆ ಈಡಾಗಿದೆ. ಆದರೆ ಪತಿಯ ಚಿಕಿತ್ಸೆಗೆ ಬೇರೆ ದಾರಿ ಕಾಣದೇ ಕೊನೆಗೆ ಪತ್ನಿಯು ತನ್ನ ತಾಳಿಯನ್ನೇ ಮಾರಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
"ಈ ಹಿಂದೆ ಬಿಪಿಎಲ್ ಕಾರ್ಡ್ಗೆ ಅರ್ಜಿ ಹಾಕಿದ್ದೇವೆ. ಆದರೆ, ಅಧಿಕಾರಿಗಳು ಎಪಿಎಲ್ ಕಾರ್ಡ್ ನೀಡಿದ್ದಾರೆ. ನಮಗೆ ಹಣ ಕೊಟ್ಟು ಪಡಿತರ ತೆಗೆದುಕೊಳ್ಳುವ ಶಕ್ತಿ ಕೂಡಾ ಇಲ್ಲ. ಹೀಗಾಗಿ, ನಮಗೆ ಬಿಪಿಎಲ್ ಕಾರ್ಡ್ ಇದ್ದಿದ್ದರೆ ಉಚಿತವಾಗಿ ಆಹಾರ ಧಾನ್ಯಗಳು ಸಿಗುತ್ತಿತ್ತು. ಇದೀಗ ಅದು ಕೂಡಾ ಇಲ್ಲ. ಹೀಗಾಗಿ, ನಮಗೆ ಕಣ್ಣೀರೇ ಹೊಟ್ಟೆ ತುಂಬಿಸುತ್ತಿದೆ ಎಂದು ನಾಗರಾಜ್ ಪತ್ನಿ ಶರಣಮ್ಮ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.







