ಕಾರ್ಮಿಕರ ರೈಲು ಪ್ರಯಾಣ ದರ ಆಯಾ ರಾಜ್ಯ ಸರಕಾರಗಳೇ ಭರಿಸಲಿವೆ: ಸುರೇಶ್ ಅಂಗಡಿ

ಬೆಳಗಾವಿ, ಮೇ 3: ವಲಸೆ ಕಾರ್ಮಿಕರನ್ನು ಮರಳಿ ಅವರ ರಾಜ್ಯಕ್ಕೆ ಕಳುಹಿಸಲು ಗೃಹ ಇಲಾಖೆ ಆದೇಶ ನೀಡಿರುವ ಹಿನ್ನೆಲೆ ರೈಲಿನಲ್ಲಿ ಕಾರ್ಮಿಕರು ತಮ್ಮ ಸ್ವಂತ ಊರುಗಳಿಗೆ ಪ್ರಯಾಣ ಮಾಡಬಹುದಾಗಿದ್ದು, ಪ್ರಯಾಣ ದರವನ್ನು ಆಯಾ ರಾಜ್ಯ ಸರಕಾರಗಳು ಭರಿಸಲಿವೆ ಎಂದು ಕೇಂದ್ರ ಸಚಿವ ಸುರೇಶ್ ಅಂಗಡಿ ಹೇಳಿದ್ದಾರೆ.
ರವಿವಾರ ಬೆಳಗಾವಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಯಾಣಕ್ಕೆ ನೆರವಾಗಲು ಕಾರ್ಮಿಕರನ್ನು ಕಳಿಸುವ ರಾಜ್ಯದಿಂದ ಮತ್ತು ಸ್ವೀಕರಿಸುವ ರಾಜ್ಯದಲ್ಲಿ ನೋಡಲ್ ಅಧಿಕಾರಿಗಳನ್ನ ನೇಮಕ ಮಾಡಲಾಗಿದೆ. ಆರೋಗ್ಯ ತಪಾಸಣೆ ಆಯಾ ರಾಜ್ಯ ಸರಕಾರಕ್ಕೆ ಬಿಟ್ಟಿದ್ದು ಎಂದು ಹೇಳಿದರು.
ಕಾರ್ಮಿಕರ ಪ್ರಯಾಣದ ಹಣವನ್ನು ಆಯಾ ರಾಜ್ಯ ಸರಕಾರವೇ ಭರಿಸಬೇಕು. ಒಂದು ವೇಳೆ ಕರ್ನಾಟಕದಿಂದ ರಾಜಸ್ಥಾನ ಅಥವಾ ಗುಜರಾತ್‍ಗೆ ಕಾರ್ಮಿಕರನ್ನು ಕಳುಹಿಸಬೇಕಾದರೆ ಆಯಾ ರಾಜ್ಯ ಸರಕಾರದ ರೈಲ್ವೆ ಇಲಾಖೆ ಹಣ ನೀಡಬೇಕು ಎಂದು ತಿಳಿಸಿದರು.
ರಾಜಸ್ಥಾನದ 16 ಸಾವಿರ ಕಾರ್ಮಿಕರು ಈಗಾಗಲೇ ನೋಂದಣಿ ಮಾಡಿದ್ದಾರೆ. ರಾಜ್ಯಗಳ ಬೇಡಿಕೆ ಅನುಸಾರ ರೈಲು ಬಿಡುತ್ತೇವೆ. ನಮ್ಮ ರಾಜ್ಯ ಸರಕಾರದಿಂದ ರೈಲ್ವೆ ಇಲಾಖೆಗೆ ಪತ್ರ ಬಂದಿದೆ. ಇದನ್ನು ಕೇಂದ್ರ ಆರೋಗ್ಯ, ಕೇಂದ್ರ ವಿಪತ್ತು ನಿರ್ವಹಣಾ ತಂಡ ನಿರ್ವಹಣೆ ಮಾಡಲಿದೆ. ಸದ್ಯ, ಕಾರ್ಮಿಕರು ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರೋಕೆ ಅವಕಾಶವಿಲ್ಲ. ಈ ಬಗ್ಗೆ ರಾಜ್ಯದ ಮುಖ್ಯ ಕಾರ್ಯದರ್ಶಿ ಶನಿವಾರ ಸಭೆಯಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಂಪುಟದಲ್ಲಿ ಮತ್ತೊಮ್ಮೆ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.







