ಲಾಕ್ ಡೌನ್ ನಿಂದ ಕಂಗಾಲು: ತರಕಾರಿ ಮಾರಾಟಕ್ಕಿಳಿದ ಆಭರಣ ವ್ಯಾಪಾರಿ

ಹೊಸದಿಲ್ಲಿ: ಕೊರೋನ ವೈರಸ್ ಕಾರಣದಿಂದ ಘೋಷಿಸಲಾದ ಲಾಕ್ ಡೌನ್ ನಿಂದ ಕಂಗಾಲಾದ 25 ವರ್ಷಗಳಿಂದ ಆಭರಣದ ವ್ಯಾಪಾರ ನಡೆಸುತ್ತಿದ್ದ ವ್ಯಕ್ತಿಯೊಬ್ಬರು ತರಕಾರಿ ಮಾರಾಟಕ್ಕಿಳಿದ ಬಗ್ಗೆ ವರದಿಯಾಗಿದೆ.
ಜೈಪುರದ ಹುಕುಮ್ ಚಂದ್ ಸೋನಿ ಎಂಬವರೇ ತರಕಾರಿ ಮಾರಾಟಕ್ಕಿಳಿದ ಆಭರಣ ವ್ಯಾಪಾರಿ.
ಬೆಲೆಬಾಳುವ ಆಭರಣಗಳು ತುಂಬಿರುತ್ತಿದ್ದ ಅವರ ಅಂಗಡಿಯ ಕೌಂಟರ್ ಗಳಲ್ಲಿ ಈಗ ವಿವಿಧ ತರಕಾರಿಗಳು ಮತ್ತು ತೂಕದ ತಕ್ಕಡಿಯಿದೆ. “ನಾನು ತರಕಾರಿ ಮಾರಲು ಆರಂಭಿಸಿ 4 ದಿನಗಳಾದವು. ನಾನು ಬದುಕಿ ಉಳಿಯಲು ಇದೇ ಉಳಿದಿರುವ ದಾರಿ” ಎಂದವರು ಹೇಳುತ್ತಾರೆ.
“ನನ್ನಲ್ಲಿ ದೊಡ್ಡ ಉಳಿತಾಯವಿಲ್ಲ. ಬಂಡವಾಳವಿಲ್ಲ, ಆದ್ದರಿಂದ ತರಕಾರಿ ಮಾರಲು ಆರಂಭಿಸಿದೆ. ನನ್ನ ಜ್ಯುವೆಲ್ಲರಿ ಅಂಗಡಿ ದೊಡ್ಡದೇನಲ್ಲ. ಆದರೆ ಕುಟುಂಬದ ನಿರ್ವಹಣೆಗೆ ಅದರ ಆದಾಯ ಸಾಕಾಗುತ್ತಿತ್ತು” ಎಂದವರು ಹೇಳಿದ್ದಾರೆ.
“ಹಲವು ದಿನಗಳಿಂದ ನಾವು ಮನೆಯಲ್ಲೇ ಕುಳಿತಿದ್ದೇವೆ. ನಮಗೆ ಆಹಾರ ಮತ್ತು ಹಣವನ್ನು ನೀಡುವವರು ಯಾರು? , ನಾನು ಸಣ್ಣ ಸಣ್ಣ ಆಭರಣಗಳನ್ನು ಮಾರುತ್ತಿದ್ದೆ. ಈಗ ಪ್ರತಿಯೊಬ್ಬರೂ ನಷ್ಟ ಅನುಭವಿಸುತ್ತಿದ್ದಾರೆ” ಎಂದವರು ವಿವರಿಸುತ್ತಾರೆ.





