ಕೋವಿಡ್-19: ಜೂನ್‌ನಲ್ಲಿ ಕಾದಿದೆ ಭಾರತಕ್ಕೆ ಗಂಡಾಂತರ!

ಕೊಲ್ಕತ್ತಾ, ಮೇ 4: ದೇಶದಲ್ಲಿ ಲಾಕ್‌ಡೌನ್ ಹೇರಿಕೆಯಿಂದಾಗಿ ಕೊರೋನ ವೈರಸ್ ಸೋಂಕು ಗರಿಷ್ಠ ಪ್ರಮಾಣವನ್ನು ತಲುಪುವ ಅವಧಿ ಜೂನ್ ಮಧ್ಯಭಾಗಕ್ಕೆ ಮುಂದೂಡಲ್ಪಟ್ಟಿದೆ ಎಂದು ಕೊಲ್ಕತ್ತಾ ಮೂಲದ ಇಂಡಿಯನ್ ಅಸೋಸಿಯೇಶನ್ ಫಾರ್ ಕಲ್ಟಿವೇಶನ್ ಆಫ್ ಸೈನ್ಸ್ (ಐಎಸಿಎಸ್) ನಡೆಸಿದ ಅಧ್ಯಯನ ತಿಳಿಸಿದೆ.
ಕೋವಿಡ್-19 ಪರೀಕ್ಷೆ ಹೆಚ್ಚಿಸುವುದು ಹಾಗೂ ನಿರ್ದಿಷ್ಟ ವಲಯಗಳಲ್ಲಿ ಲಾಕ್‌ಡೌನ್ ಕಟ್ಟುನಿಟ್ಟುಗೊಳಿಸುವ ಮೂಲಕ ಗರಿಷ್ಠ ಪ್ರಮಾಣವನ್ನು ಅರ್ಧದಷ್ಟು ತಡೆಯಬಹುದು ಎಂದೂ ಈ ಅಧ್ಯಯನ ವರದಿ ಸಲಹೆ ಮಾಡಿದೆ. ಲಾಕ್‌ಡೌನ್‌ನಿಂದಾಗಿ ವೈರಸ್ ಸೋಂಕು ಗರಿಷ್ಠ ಪ್ರಮಾಣ ತಲುಪುವ ಅವಧಿ ಒಂದು ತಿಂಗಳು ವಿಸ್ತರಣೆಯಾಗಿದ್ದರಿಂದ, ಚಿಕಿತ್ಸಾ ವಿಧಾನಗಳ ಬಗ್ಗೆ ಕಾರ್ಯತಂತ್ರ ರೂಪಿಸಲು ಹೆಚ್ಚು ಸಮಯಾವಕಾಶ ಸಿಕ್ಕಿದೆ ಎಂದು ಅಭಿಪ್ರಾಯಪಡಲಾಗಿದೆ.
ಬಯೋ ಕಂಪ್ಯುಟೇಶನಲ್ ಮಾಡೆಲಿಂಗ್ ವಿಧಾನದಲ್ಲಿ ನಡೆಸಿದ ಈ ಅಧ್ಯಯನದ ಪ್ರಕಾರ, ದೇಶದಲ್ಲಿ ಜೂನ್ ಮಧ್ಯಭಾಗದ ವೇಳೆಗೆ ಸೋಂಕು ಗರಿಷ್ಠ ಪ್ರಮಾಣ ತಲುಪಲಿದ್ದು, ಸುಮಾರು 1.5 ಲಕ್ಷ ಮಂದಿಗೆ ಸೋಂಕು ತಗುಲುವ ನಿರೀಕ್ಷೆ ಇದೆ. ಸದ್ಯ ಸೋಂಕು ಪುನರುತ್ಪತ್ತಿ ದರ 2.2 ಇದೆ. ಅಂದರೆ ಪ್ರತಿ 100 ಸೋಂಕಿತರಿಂದ 220 ಮಂದಿಗೆ ಸೋಂಕು ಹರಡುತ್ತಿದೆ ಎಂದು ಅಧ್ಯಯನ ಅಂದಾಜಿಸಿದೆ. ಆದರೆ ಪರಿಣಾಮಕಾರಿ ಪರೀಕ್ಷಾ ವಿಧಾನ ಮತ್ತು ಲಾಕ್‌ಡೌನ್ ನಿರ್ವಹಣೆಯಿಂದ ಈ ದರವನ್ನು ಜೂನ್ ಅಂತ್ಯದ ವೇಳೆಗೆ 0.7ಕ್ಕೆ ಇಳಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದೆ. ದೇಶದಲ್ಲಿ ಲಾಕ್‌ಡೌನ್ ಇಲ್ಲದಿದ್ದ ಪಕ್ಷದಲ್ಲಿ ಮೇ ಮಧ್ಯಭಾಗದ ವೇಳೆಗೆ ದೇಶದಲ್ಲಿ ಸೋಂಕು ಗರಿಷ್ಠ ಪ್ರಮಾಣ ತಲುಪುತ್ತಿತ್ತು ಎಂದು ಅಂದಾಜಿಸಿದೆ.







