ಕೊರೋನ ಚೀನಾದ ಲ್ಯಾಬ್ನಿಂದ ಹರಡಿದ್ದು ಎಂಬುದಕ್ಕೆ ಮಹತ್ವದ ಪುರಾವೆ ಲಭ್ಯ: ಅಮೆರಿಕ

ಮೈಕ್ ಪೊಂಪೆಯೊ
ವಾಷಿಂಗ್ಟನ್, ಮೇ 4: ಇಡೀ ವಿಶ್ವವನ್ನು ಅಲ್ಲೋಲ ಕಲ್ಲೋಲಗೊಳಿಸಿರುವ ಕೊರೋನ ವೈರಸ್ ಚೀನಾದ ಪ್ರಯೋಗಾಲಯದಿಂದ ಹರಡಿದ್ದು ಎನ್ನುವುದಕ್ಕೆ ಮಹತ್ವದ ಪುರಾವೆ ಲಭಿಸಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮೈಕ್ ಪೊಂಪೆಯೊ ಹೇಳಿದ್ದಾರೆ. ಆದರೆ ಇದು ಮಾನವ ನಿರ್ಮಿತವಲ್ಲ ಎಂಬ ಅಮೆರಿಕದ ಬೇಹುಗಾರಿಕಾ ವಿಭಾಗದ ಹೇಳಿಕೆಯನ್ನು ಅವರು ಅಲ್ಲಗಳೆಯಲಿಲ್ಲ.
ಈ ವೈರಸ್ ವುಹಾನ್ ಪ್ರಯೋಗಾಲಯದಿಂದ ಹರಡಿದೆ ಎನ್ನುವುದಕ್ಕೆ ಮಹತ್ವದ ಪುರಾವೆಗಳಿವೆ ಎಂದುವರು ಸ್ಪಷ್ಟಪಡಿಸಿದ್ದಾರೆ. ವಿಶ್ವಾದ್ಯಂತ ಈಗಾಗಲೇ ಈ ಮಾರಕ ಸೋಂಕಿಗೆ 2.40 ಲಕ್ಷ ಮಂದಿ ಮೃತಪಟ್ಟಿದ್ದು, ಇದರಲ್ಲಿ 67 ಸಾವಿರ ಅಮೆರಿಕನ್ನರು ಸೇರಿದ್ದಾರೆ.
ಅಮೆರಿಕದ ಗುಪ್ತಚರ ವಿಭಾಗದ ಹೇಳಿಕೆ ಪ್ರಕಾರ, ಇದು ಮಾನವ ನಿರ್ಮಿತ ಅಥವಾ ಕುಲಾಂತರಿ ವಿಧಾನದ ಮೂಲಕ ಸೃಷ್ಟಿಯಾದದ್ದಲ್ಲ. ಆದರೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಾರ, ಇದು ಚೀನಾದ ಜೈವಿಕ ಶಸ್ತ್ರಾಸ್ತ್ರ ಪ್ರಯೋಗಾಲಯದಲ್ಲಿ ಅಭಿವೃದ್ಧಿಗೊಂಡಿರುವ ವೈರಸ್.
ಗುಪ್ತಚರ ವಿಭಾಗ ಅಧಿಕೃತವಾಗಿ ನೀಡಿರುವ ಹೇಳಿಕೆ ಪ್ರಕಾರ, ಇದು ಚೀನಾದ ವುಹಾನ್ ಮಾಂಸ ಮಾರುಕಟ್ಟೆಯಲ್ಲಿ ಪ್ರಾಣಿಗಳಿಂದ ಮನುಷ್ಯರಿಗೆ ತಗುಲಿರುವ ಸಾಧ್ಯತೆ ಇದೆ ಅಥವಾ ವುಹಾನ್ನಲ್ಲಿರುವ ಸರ್ಕಾರಿ ಪ್ರಯೋಗಾಲಯಗಳಲ್ಲಿ ಸಂಭಾವ್ಯ ಜೈವಿಕ ಅಪಾಯಗಳ ಬಗ್ಗೆ ಸಂಶೋಧನೆ ನಡೆಯುತ್ತಿರುವ ಸಂದರ್ಭದಲ್ಲಿ ಪ್ರಯೋಗಾಲಯದಿಂದ ಹರಡಿದೆ.







