ಲೌಕ್‌ಡೌನ್ ಸಡಿಲಿಕೆ: ಸಹಜಸ್ಥಿತಿಯತ್ತ ಉಡುಪಿ ನಗರ, ಹಲವೆಡೆ ಟ್ರಾಫಿಕ್ ಕಿರಿಕಿರಿ

ಉಡುಪಿ, ಮೇ 4: ಕೋವಿಡ್-19ಗೆ ಸಂಬಂಧಿಸಿ ಹಸಿರು ವಲಯವಾಗಿರುವ ಉಡುಪಿ ಜಿಲ್ಲೆಯಲ್ಲಿ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯಿಂದ ಭಾರೀ ಸಂಖ್ಯೆಯಲ್ಲಿ ವಾಹನಗಳು ರಸ್ತೆಗೆ ಇಳಿದಿರುವುದರಿಂದ ಉಡುಪಿ ನಗರದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು.
ಇಂದಿನಿಂದ ಜಿಲ್ಲೆಯಲ್ಲಿ ಎಲ್ಲ ರೀತಿಯ ಅಂಗಡಿಮುಗ್ಗಟ್ಟುಗಳಿಗೆ ಬೆಳಗ್ಗೆ ಏಳರಿಂದ ಮಧ್ಯಾಹ್ನ ಒಂದು ಗಂಟೆಯವರೆಗೆ ಅವಕಾಶ ಕಲ್ಪಿಸಿರುವುದರಿಂದ ನಗರದಲ್ಲಿ ಜನಸಂದಣಿ ಹೆಚ್ಚಾಗಿತ್ತು. ಬಹುತೇಕ ಅಂಗಡಿ, ಕಚೇರಿಗಳು ತೆರೆದಿರುವುದು ಕಂಡುಬಂತು. ಎಲ್ಲ ರಸ್ತೆಗಳಲ್ಲಿಯೂ ವಾಹನ ದಟ್ಟನೆಯಿಂದ ಟ್ರಾಫಿಕ್ ಕಿರಿ ಕಿರಿ ಉಂಟಾಯಿತು. ಕಲ್ಸಂಕ, ಕೆ.ಎಂ.ಮಾರ್ಗಗಳಲ್ಲಿ ಹಲವು ಹೊತ್ತು ವಾಹನ ಸಂಚಾರದಲ್ಲಿ ವ್ಯತ್ಯಯ ಕಂಡುಬಂತು.
ಕಾರುಗಳು ಬಹುಸಂಖ್ಯೆಯಲ್ಲಿ ರಸ್ತೆಗೆ ಇಳಿದಿದ್ದು, ರಿಕ್ಷಾಗಳ ಓಡಾಟ ಕೂಡ ಸಾಮಾನ್ಯವಾಗಿತ್ತು. ಆದರೆ ಬಸ್ ಸಂಚಾರಕ್ಕೆ ಇನ್ನು ಕೂಡ ಅವಕಾಶ ನೀಡಿಲ್ಲ. ಅದೇ ರೀತಿ ಮಾಲ್‌ಗಳು, ಸೆಲೂನ್, ಬ್ಯೂಟಿಪಾರ್ಲರ್ ಬಂದ್ ಆಗಿದ್ದವು.










