ಚಿಕ್ಕಮಗಳೂರು: ವಾಣಿಜ್ಯ ಚಟುವಟಿಕೆ ಚುರುಕು, ರಸ್ತೆಗಿಳಿದ ಕೆಎಸ್ಸಾರ್ಟಿಸಿ ಬಸ್
ಮದ್ಯದಂಗಡಿಗಳ ಎದುರು ಪಾನಪ್ರಿಯರ ಭಾರೀ ಕ್ಯೂ

ಚಿಕ್ಕಮಗಳೂರು, ಮೇ 4: ಹಸಿರು ವಲಯದಲ್ಲಿ ಲಾಕ್‌ಡೌನ್ ಸಡಿಲಿಕೆಯ ಹಿನ್ನೆಲೆಯಲ್ಲಿ 44 ದಿನಗಳ ಬಳಿಕ ಜಿಲ್ಲೆಯ ಜನರು ರಸ್ತೆಗಿಳಿದಿದ್ದಾರೆ.
ಬಿಕೋ ಎನ್ನುತ್ತಿದ್ದ ರಸ್ತೆಗಳಲ್ಲಿ ಬೆಳಗ್ಗೆಯಿಂದಲೇ ಜನಜಂಗುಳಿ ಕಂಡುಬರುತ್ತಿದ್ದು, ನಗರದಲ್ಲಿ ವಾಹನಗಳ ಓಡಾಟ ಜೋರಾಗಿಯೇ ಇದೆ. ವ್ಯಾಪಾರ, ವಾಣಿಜ್ಯ ಚಟುವಟಿಕೆಗಳು ಚುರುಕುಗೊಂಡಿವೆ.
ಜಿಲ್ಲೆಯಲ್ಲಿ ಸರಕಾರಿ ಬಸ್ಸುಗಳ ಸಂಚಾರ ಆರಂಭವಾಗಿದ್ದು, ನೂರು ಬಸ್ಸುಗಳು ರಸ್ತೆಗಿಳಿದಿವೆ. ಬಸ್‌ಗಳಲ್ಲಿ ಶೇ. 50ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಷ್ಟವಾಗುವ ಭೀತಿಯಿಂದ ಖಾಸಗಿ ಬಸ್ಸುಗಳು ರಸ್ತೆಗಿಳಿಯಲು ಹಿಂದೇಟು ಹಾಕಿವೆ. ಈ ನಡುವೆ ನಗರದಲ್ಲಿ ಆಟೋ, ಟ್ಯಾಕ್ಸಿಗಳು ಸಂಚಾರ ಆರಂಭಿಸಿವೆ.
ಜಿಲ್ಲಾದ್ಯಂತ ಬೆಳಗ್ಗೆ 9 ಗಂಟೆ ಬಳಿಕ ಮದ್ಯದಂಗಡಿಗಳು ತೆರೆದಿವೆ. ಆದರೆ ಪಾನಪ್ರಿಯರು ಮದ್ಯದಂಗಡಿಗಳ ಮುಂದೆ ಬೆಳಗ್ಗೆಯಿಂದಲೇ ಜಮಾಯಿಸಿ, ಸರತಿಯಲ್ಲಿ ಕಾಯುತ್ತಿದ್ದ ದೃಶ್ಯಗಳು ಎಲ್ಲೆಡೆ ಸಾಮಾನ್ಯವಾಗಿತ್ತು. ತರೀಕೆರೆಯ ಕೋಡಿ ಕ್ಯಾಂಪ್ ಎಂಬಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಮದ್ಯದಂಗಡಿ ಎದುರು ಸರತಿ ಸಾಲು ಕಂಡುಬಂದಿತ್ತು. ಚಿಕ್ಕಮಗಳೂರಿನ ವೈನ್ ಶಾಪ್‌ವೊಂದರ ಎದುರು ಮದ್ಯ ಖರೀದಿಗಾಗಿ ಮಹಿಳೆಯರೂ ಕ್ಯೂನಲ್ಲಿ ನಿಂತಿರುವುದು ಕಂಡುಬಂದಿತ್ತು.
ಸರಿಸುಮಾರು ಒಂದೂವರೆ ತಿಂಗಳ ಬಳಿಕ ಹೋಟೆಲ್‌ಗಳು, ಗೂಡಂಗಡಿಗಳು, ಸೆಲೂನ್‌ಗಳು ತೆರೆದಿವೆ. ಸೆಲೂನ್‌ಗಳ ಎದುರು ಕ್ಷೌರಕ್ಕಾಗಿ ಜನರು ಕಾಯುತ್ತಿದ್ದಾರೆ.







