ಮೈಸೂರು: ರೆಡ್ ಝೋನ್ ಹೊರತುಪಡಿಸಿ ಇತರೆಡೆಗಳಲ್ಲಿ ತೆರೆದ ಮದ್ಯದಂಗಡಿ, ಖರೀದಿಗೆ ಮುಗಿಬಿದ್ದ ಮದ್ಯಪ್ರಿಯರು

ಮೈಸೂರು, ಮೇ 4: ರಾಜ್ಯ ಸರ್ಕಾರ ಮದ್ಯ ಮಾರಾಟಕ್ಕೆ ಅವಕಾಶಕೊಟ್ಟ ಹಿನ್ನಲೆಯಲ್ಲಿ ಮೈಸೂರಿನಲ್ಲೂ ಮದ್ಯ ಮಾರಾಟ ಆರಂಭವಾಗಿದ್ದು, ವೈನ್ ಶಾಪ್ ಗಳು ಮತ್ತು ಎಂ.ಎಸ್.ಐ.ಎಲ್.ಗಳ ಮುಂದೆ ಮದ್ಯಪ್ರಿಯರು ಜೋಶ್ ನಲ್ಲಿ ಮದ್ಯ ಖರೀದಿಗೆ ಮುಂದಾಗಿದ್ದಾರೆ.
ಮೈಸೂರು ರೆಡ್ ಝೋನ್ ಜಿಲ್ಲೆಯಾಗಿದ್ದು, ನಿರ್ಬಂದಿತ ವಲಯಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸದೆ ಇತರೆಡೆಗಳಲ್ಲಿರುವ ವೈನ್ ಶಾಪ್ ಮತ್ತು ಸಗದು ಮಾರಾಟ ಕೇಂದ್ರಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ.
ಬೆಳಗಿನ ಜಾವದಿಂದಲೇ ಕೆಲವು ವೈನ್ ಶಾಪ್ ಗಳ ಮುಂದೆ ಜನರು ಮದ್ಯ ಖರೀದಿಗೆ ಕಾದು ಕುಳಿತಿದ್ದರು. ಈ ಮಧ್ಯೆ ಮದ್ಯಪ್ರಿಯರಿಗೆ ಆಗಾಗ ಪೊಲೀಸರು ಮೈಕ್ ನಲ್ಲಿ ಸಾರುವ ಮೂಲಕ ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ಎಚ್ಚರಿಸುತ್ತಿದ್ದರು.
ಇನ್ನೂ ಜಿಲ್ಲೆಯ ಹುಣಸೂರು, ಟಿ.ನರಸೀಪುರ, ಎಚ್.ಡಿ.ಕೋಟೆ, ಪಿರಿಯಾಪಟ್ಟಣ, ಪಟ್ಟಣಗಳಲ್ಲೂ ಮದ್ಯ ಖರೀದಿಗೆ ಮುಗಿ ಬಿದ್ದಿದ್ದರು.
ನಂಜನಗೂಡಿನಲ್ಲೂ ಮದ್ಯ ಖರೀದಿ ಜೋರು: ಹಾಟ್ ಸ್ಪಾಟ್ ನಗರ ಎಂದೇ ಗುರುತಿಸಿಕೊಂಡಿರುವ ನಂಜನಗೂಡಿನಲ್ಲಿ ಮದ್ಯ ಖರೀದಿ ಸಕತ್ ಜೋರಾಗಿ ಕಂಡು ಬಂತು. ಕೊರೋನ ಬೀತಿಯಿಂದ ಕಂಗಾಲಾಗಿದ್ದ ಜನ ಮದ್ಯ ಖರೀದಿಗೆ ಯಾವ ಭಯವೂ ಇಲ್ಲದೆ ಆಗಮಿಸುತ್ತಿದ್ದರು.
ನಂಜನಗೂಡಿನಲ್ಲಿ ಎರಡು ವೈನ್ ಶಾಪ್ ಗಳಲ್ಲಷ್ಟೇ ಮದ್ಯ ಖರೀದಿಗೆವಾಕಾಶ ಕಲ್ಪಿಸಲಾಗಿದೆ. ಹಾಗಾಗಿ ಸೋಮವಾರ ಬೆಳಗ್ಗೆಯಿಂದಲೇ ಮದ್ಯ ಖರೀದಿಗೆ ಪಾನಪ್ರಿಯರು ಮುಗಿ ಬಿದ್ದಿದ್ದಾರೆ.
ಪೂಜೆ ಮಾಡಿ ಬಾಗಿಲು ತೆಗೆದ ಮಾಲಕರು: ಕಳೆದ 42 ದಿನಗಳಿಂದ ಕಾಂಚಾಣ ಎಣಿಸದೆ ಕಂಗಾಲಾಗಿದ್ದ ಬಾರ್ ಮಾಲಕರುಗಳು ಅಂಗಡಿಯನ್ನು ಹೂವುಗಳಿಂದ ಸಿಂಗರಿಸಿ ಗಂಧದ ಕಡ್ಡಿ, ಕರ್ಪೂರ ಹಚ್ಚಿ ಪೂಜೆ ಮಾಡಿ ಬಾಗಿಲುಗಳನ್ನು ತಗೆದರು.











