ಎಚ್‌ಐವಿ, ಡೆಂಗ್‌ನಂತೆ ಕೊರೋನ ವೈರಸ್‌ಗೂ ಲಸಿಕೆ ಲಭ್ಯವಾಗದೆ ಇರಬಹುದು: ವರದಿ

ಹೊಸದಿಲ್ಲಿ,ಮೇ 4: ಕೋವಿಡ್-19 ರೋಗದ ವಿರುದ್ಧ ಪರಿಣಾಮಕಾರಿ ಲಸಿಕೆಯನ್ನು ಕಂಡುಹಿಡಿಯಲು ವಿಜ್ಞಾನಿಗಳಿಗೆ ಸಾಧ್ಯವಾಗದಿರಬಹುದು ಎಂದು ಪ್ರಮುಖ ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹಿಂದೆ ಏಡ್ಸ್ ಮತ್ತು ಡೆಂಗ್ ವಿಷಯದಲ್ಲಿಯೂ ಹೀಗೇ ಆಗಿತ್ತು ಎಂದು ಅವರು ಬೆಟ್ಟು ಮಾಡಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಸದ್ಯ ನೂರಕ್ಕೂ ಅಧಿಕ ಲಸಿಕೆಗಳನ್ನು ಪ್ರಿ-ಕ್ಲಿನಿಕಲ್ ಪ್ರಯೋಗಗಳಿಗೆ ಒಳಪಡಿಸಲಾಗಿದೆ. ಈ ಪೈಕಿ ಚಿಂಪಾಂಜಿಯ ವೈರಸ್‌ನಿಂದ ಸಿದ್ಧಗೊಳಿಸಲಾದ ಲಸಿಕೆ ಇಂಗ್ಲಂಡ್‌ನ ಆಕ್ಸ್‌ಫರ್ಡ್ ವಿವಿಯಲ್ಲಿ ಮತ್ತು ಮೊಡೆರ್ನಾ ತಯಾರಿಸಿರುವ ಇನ್ನೊಂದು ಲಸಿಕೆ ಅಮೆರಿಕದಲ್ಲಿ ಮಾನವರ ಮೇಲೆ ಪರೀಕ್ಷಾ ಹಂತವನ್ನು ತಲುಪಿವೆ.
“ಕೆಲವು ವೈರಸ್‌ಗಳ ವಿರುದ್ಧ ನಮ್ಮ ಬಳಿ ಇನ್ನೂ ಲಸಿಕೆಗಳಿಲ್ಲ. ಕೊರೋನ ವೈರಸ್‌ಗೆ ಲಸಿಕೆಯೊಂದು ದೊರೆಯುತ್ತದೆ ಎಂದು ನಾವು ಗ್ರಹಿಸುವಂತಿಲ್ಲ ಮತ್ತು ಒಂದು ವೇಳೆ ದೊರಕಿದರೂ ಅದು ಪರಿಣಾಮಕಾರಿತ್ವ ಮತ್ತು ಸುರರಕ್ಷತೆಯ ಎಲ್ಲ ಪರೀಕ್ಷೆಗಳಲ್ಲಿಯೂ ತೇರ್ಗಡೆಗೊಳ್ಳುತ್ತದೆ ಎಂದು ಹೇಳುವಂತಿಲ್ಲ” ಎಂದು ಲಂಡನ್ನಿನ ಇಂಪೀರಿಯಲ್ ಕಾಲೇಜಿನಲ್ಲಿ ಜಾಗತಿಕ ಆರೋಗ್ಯ ಪ್ರೊಫೆಸರ್ ಹಾಗೂ ಕೋವಿಡ್-19 ಕುರಿತು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲುಎಚ್‌ಒ)ಯ ವಿಶೇಷ ರಾಯಭಾರಿಯಾಗಿರುವ ಡಾ.ಡೇವಿಡ್ ನಬಾರೊ ಹೇಳಿದ್ದಾಗಿ ಸಿಎನ್‌ಎನ್ ವರದಿ ಮಾಡಿದೆ.
12ರಿಂದ 18 ತಿಂಗಳುಗಳಲ್ಲಿ ಲಸಿಕೆಯೊಂದು ದೊರೆಯಲಿದೆ ಎಂದು ಸಾಂಕ್ರಾಮಿಕ ರೋಗಗಳ ತಜ್ಞ ಅಂಥೋನಿ ಫಾಸಿ ಹೇಳಿದ್ದರೆ,ಲಸಿಕೆ ದೊರೆಯಲು ಇದಕ್ಕಿಂತ ಹೆಚ್ಚಿನ ಸಮಯ ಬೇಕಾಗಬಹುದು ಎಂದು ಇತರರು ಹೇಳಿದ್ದಾರೆ.
ಎಚ್‌ಐವಿ ಮತ್ತು ಮಲೇರಿಯಾಗಳಂತೆ ಕೋರೋನ ವೈರಸ್ ತ್ವರಿತವಾಗಿ ರೂಪಾಂತರಗೊಳ್ಳುವುದಿಲ್ಲ, ಹೀಗಾಗಿ ಅಂತಿಮವಾಗಿ ಲಸಿಕೆಯೊಂದು ತಯಾರಾಗಬಹುದು ಎಂದು ಹೆಚ್ಚಿನ ತಜ್ಞರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆದರೆ ಲಸಿಕೆಯನ್ನು ಅಭಿವೃದ್ಧಿಗೊಳಿಸುವ ಪ್ರಕ್ರಿಯೆಯು ನಿಧಾನ ಮತ್ತು ಯಾತನಾದಾಯಕ ಎಂದು ಬೆಟ್ಟು ಮಾಡಿರುವ ನಬಾರೊ, “ನೀವು ಭಾರೀ ಆಸೆಯನ್ನು ಹೊಂದಿರುತ್ತೀರಿ ಮತ್ತು ಅವು ನುಚ್ಚುನೂರಾಗುತ್ತವೆ. ನಾವು ಜೈವಿಕ ವ್ಯವಸ್ಥೆಯೊಡನೆ ವ್ಯವಹರಿಸುತ್ತೇವೆ,ಯಾಂತ್ರಿಕ ವ್ಯವಸ್ಥೆಗಳ ಜೊತೆಯಲ್ಲಲ್ಲ. ಅದು ಬಹುವಾಗಿ ಶರೀರವು ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದನ್ನು ಅವಲಂಬಿಸಿರುತ್ತದೆ” ಎಂದು ಹೇಳಿದ್ದಾರೆ.
ಒಟ್ಟು 102 ಲಸಿಕೆಗಳು ಪೈಪೋಟಿಯಲ್ಲಿದ್ದು,ಈ ಪೈಕಿ ಎಂಟು ಪ್ರಮುಖ ಲಸಿಕೆಗಳು ಮಾನವರ ಮೇಲೆ ಪರೀಕ್ಷೆಯ ಹಂತದಲ್ಲಿವೆ ಎಂದು ಡಬ್ಲ್ಯುಎಚ್‌ಒ ತಿಳಿಸಿದೆ.







