ಮೇ 7ರಿಂದ ಹೊಸ ಎಲ್‌ಎಲ್/ಡಿಎಲ್‌ಗೆ ಅರ್ಜಿಗೆ ಅವಕಾಶ
ಮಂಗಳೂರು, ಮೇ 4: ಮಂಗಳೂರು ಸಾರಿಗೆ ಇಲಾಖೆಯಲ್ಲಿ ಹೊಸ ಎಲ್‌ಎಲ್ ಹಾಗೂ ಡಿಎಲ್ ಅರ್ಜಿಗಳನ್ನು ಮೇ 7ರಿಂದ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಚಾಲನಾ ಅನುಜ್ಞಾ ಪತ್ರ ನವೀಕರಣ(ಆರ್‌ಡಿಎಲ್), ಚಾಲನಾ ಅನುಜ್ಞಾ ಪತ್ರ ಹಿಂಬರಹ(ಎಇಡಿಎಲ್) ನೀಡುವಿಕೆ ಮತ್ತು ವಿಳಾಸ ಬದಲಾವಣೆ(ಸಿಎ) ಎಲ್ಲವನ್ನು ಪಡೆಯಲು ನಿಗದಿತ ಸ್ಲಾಟ್‌ಗಳನ್ನು ಕಾಯ್ದಿರಿಸುವ ವ್ಯವಸ್ಥೆಯ ಮೂಲಕ ಸಾಫ್ಟ್‌ವೇರ್ ಮಾರ್ಪಾಡು ಆಗಿರುವುದರಿಂದ ಲಿಖಿತ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ ಎಂದು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಗಂಗಾಧರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸಾರಿಗೆ ಇಲಾಖೆ ಕಚೇರಿಯೊಳಗೆ ಮಾಸ್ಕ್ ಧರಿಸಿದ ಅಭ್ಯರ್ಥಿಯನ್ನು ಹೊರತುಪಡಿಸಿ ಬೇರೆ ಯಾರಿಗೂ ಪ್ರವೇಶ ನಿರಾಕರಿಸಲಾಗಿದೆ. ಈಗಾಗಲೇ ಸ್ಲಾಟ್ ಪಡೆದು ಬಾಕಿಯಾಗಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಿ ಎಲ್‌ಎಲ್ ಹಾಗೂ ಡಿಎಲ್ ಪರೀಕ್ಷೆ ಮಾಡಲಾಗುವುದು. ಮಾಸ್ಕ್ ಧರಿಸಿರುವ ಅಭ್ಯರ್ಥಿಗಳು ಕಚೇರಿ ಆವರಣದಲ್ಲಿ ಗೃಹ ರಕ್ಷಕ ಸಿಬ್ಬಂದಿ ಸೂಚನೆಯಂತೆ ಸರದಿಯಲ್ಲಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿ ಸುತ್ತಾ ಒಬ್ಬರಿಗೊಬ್ಬರು ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿಸಿದ್ದಾರೆ.





