ದ.ಕ. ಜಿಲ್ಲೆಯಲ್ಲಿ ಕೋವಿಡ್ 19 ಇ-ಪಾಸ್ ವಿತರಣೆಯಲ್ಲಿ ಅಕ್ರಮ: ಎಸ್‌ಡಿಪಿಐ ಆರೋಪ
ಮಂಗಳೂರು, ಮೇ 4: ಕೋವಿಡ್-19 (ಕೊರೋನ ವೈರಸ್) ಲಾಕ್‌ಡೌನ್ ವೇಳೆ ದ.ಕ ಜಿಲ್ಲಾಡಳಿತದ ಆಡಳಿತ ವೈಫಲ್ಯಗಳು ಮತ್ತು ಬಿಜೆಪಿಯ ರಾಜಕೀಯ ಒತ್ತಡಕ್ಕೆ ಮಣಿದು ಆ ಪಕ್ಷಕ್ಕೆ ಪೂರಕವಾಗಿ ಕೆಲಸ ಮಾಡುತ್ತಿರುವುದು ಪುನರಾವರ್ತನೆಯಾಗುತ್ತಲೇ ಇದೆ. 40 ಸಾವಿರಕ್ಕೂ ಅಧಿಕ ಅಕ್ರಮ ಪಾಸ್ ವಿತರಿಸಿದ್ದೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಎಸ್‌ಡಿಪಿಐ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಸುಹೈಲ್ ಖಾನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜನಸಾಮಾನ್ಯರ ನಡುವೆ ಸುರಕ್ಷಿತ ಅಂತರ ಕಾಪಾಡುವ ನಿಟ್ಟಿನಲ್ಲಿ ಮತ್ತು ಆಹಾರ ಸಾಮಗ್ರಿಗಳನ್ನು ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುವ ಸಲುವಾಗಿ ಹಲವಾರು ಸಮಾಜ ಸೇವಕರು ಮತ್ತು ಸಂಘಸಂಸ್ಥೆಗಳು ಪಾಸ್‌ಗಾಗಿ ಅರ್ಜಿ ಸಲ್ಲಿಸಿದ್ದರೂ ಕೂಡ ಪಾಸ್ ವಿತರಿಸಲು ಮೀನಮೇಷ ಮಾಡುತ್ತಿದ್ದ ಜಿಲ್ಲಾಡಳಿತ ಈಗ 40,000ಕ್ಕೂ ಅಧಿಕ ಪಾಸ್‌ಗಳನ್ನು ವಿತರಿಸಿದೆ. ಇವುಗಳನ್ನು ಯಾರಿಗೆಲ್ಲಾ ನೀಡಲಾಗಿದೆ ಎಂಬುದರ ಬಗ್ಗೆ ಮಾಹಿತಿ ಬಹಿರಂಗಪಡಿಸುವಂತೆ ಒತ್ತಾಯಿಸಿದ್ದಾರೆ.
ಮಂಗಳೂರಿನ ಸಹಾಯಕ ಕಮಿಷನರ್ ಮದನ್ ಮೋಹನ್ ಬಿಜೆಪಿಗರಿಗೆ ಬೇಕಾಬಿಟ್ಟಿಯಾಗಿ ಪಾಸ್ ವಿತರಣೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಪಾಸ್ ವಿತರಣೆಯಲ್ಲಿ ಅವ್ಯವಹಾರ ನಡೆಸಿದಂತೆ ಬಡವರಿಗೆ ನೀಡುವ ಆಹಾರದ ಕಿಟ್‌ನಲ್ಲೂ ಬಿಜೆಪಿ ದ್ವೇಷದ ರಾಜಕೀಯ ಮತ್ತು ಅವ್ಯಹಾರ ನಡೆಸಿದೆ. ಸಾರ್ವಜನಿಕರು, ದಾನಿಗಳು, ಸಂಘಸಂಸ್ಥೆಗಳು ಈ ಸಂಕಷ್ಟದ ಸಮಯದಲ್ಲಿ ಸರಕಾರಗಳ ಮನವಿಗೆ ಸ್ಪಂದಿಸಿ ಕೋವಿಡ್-19 ಪರಿಹಾರ ನಿಧಿಗೆ ಕೋಟಿಗಟ್ಟಲೆ ಹಣ ಸಂದಾಯ ಮಾಡಿದ್ದರೂ ಕೂಡ ಉದಾರ ದಾನಿಗಳು ನೀಡಿದ ಆಹಾರ ಸಾಮಗ್ರಿಗಳನ್ನು ಸಂಘಪರಿವಾರದ ಕಚೇರಿಯಲ್ಲಿ ರಿ-ಪ್ಯಾಕಿಂಗ್ ಮಾಡಿ ಬಿಜೆಪಿ ಪಕ್ಷದ ಪೋಸ್ಟರ್ ಅಂಟಿಸಿ ಬಿಜೆಪಿ ಮತ್ತು ಮೋದಿ ಕಿಟ್ ಎಂಬಂತೆ ಬಿಂಬಿಸಿ ಜನರನ್ನು ಮರಳು ಮಾಡಲು ಪ್ರಯತ್ನಪಟ್ಟಿರುವುದು ದ.ಕ. ಜಿಲ್ಲಾಡಳಿತದ ವೈಫಲ್ಯವಾಗಿದೆ. ಸರಕಾರದ ಅಧಿಕಾರಿಗಳ ಮೂಲಕ ಅರ್ಹರಿಗೆ ವಿತರಣೆಯಾಗಬೇಕಿದ್ದ ಆಹಾರ ಕಿಟ್‌ಗಳು ಬಿಜೆಪಿ ಕಾರ್ಯಕರ್ತರ ಮೂಲಕ ಬೇಕಾಬಿಟ್ಟಿ ವಿತರಣೆಯಾಗಿದೆ. ಜಿಲ್ಲಾಡಳಿತದ ಮೌನ ಸಮ್ಮತಿಯೇ ಇಷ್ಟೆಲ್ಲಾ ಅವ್ಯವಹಾರ ನಡೆಯಲು ಕಾರಣವಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.







