ಬಿ.ಆರ್. ಶೆಟ್ಟಿ ಕಂಪೆನಿಯ ಲೆಕ್ಕಪರಿಶೋಧಕ ಸಂಸ್ಥೆಯ ವಿರುದ್ಧ ಬ್ರಿಟನ್ ತನಿಖೆ
4 ಬಿಲಿಯ ಡಾಲರ್ ಸಾಲದ ಬಗ್ಗೆ ಹಲವು ಪ್ರಶ್ನೆಗಳು

ಲಂಡನ್, ಮೇ 4: ಯುಎಇಯಲ್ಲಿ ಉದ್ಯಮಿ ಬಿ. ಆರ್. ಶೆಟ್ಟಿ ನಡೆಸುತ್ತಿದ್ದ ಎನ್‌ಎಮ್‌ಸಿ ಹೆಲ್ತ್‌ನಲ್ಲಿ ನಡೆದಿದೆಯೆನ್ನಲಾದ ಅವ್ಯವಹಾರಗಳ ಕುರಿತ ತನಿಖೆಯು ಸಂಸ್ಥೆಯ ದೀರ್ಘಾವಧಿಯ ಲೆಕ್ಕಪರಿಶೋಧಕ ಸಂಸ್ಥೆ ಅರ್ನ್‌ಸ್ಟ್ ಮತ್ತು ಯಂಗ್ (ಇವೈ)ನ ಹೊಸ್ತಿಲಿಗೆ ಬಂದು ನಿಂತಿದೆ. ಎನ್‌ಎಂಸಿಯ 2018ರ ಆರ್ಥಿಕ ಫಲಿತಾಂಶಕ್ಕೆ ಇವೈ ಹೇಗೆ ಅನುಮೋದನೆ ನೀಡಿತು ಎಂಬ ಬಗ್ಗೆ ಬ್ರಿಟನ್‌ನ ಲೆಕ್ಕಪತ್ರ ನಿಯಂತ್ರಣ ಸಂಸ್ಥೆಯು ತನಿಖೆ ಆರಂಭಿಸಿದೆ.
2018 ಡಿಸೆಂಬರ್ 31ರಂದು ಕೊನೆಯಾದ ವರ್ಷಕ್ಕಾಗಿ ಎನ್‌ಎಂಸಿ ಹೆಲ್ತ್ ಸಿದ್ಧಪಡಿಸಿದ ಹಣಕಾಸು ಹೇಳಿಕೆಗಳ ಬಗ್ಗೆ ಅರ್ನ್‌ಸ್ಟ್ ಮತ್ತು ಯಂಗ್ ಎಲ್‌ಎಲ್‌ಪಿ ನಡೆಸಿದ ಲೆಕ್ಕಪರಿಶೋಧನೆಯ ಬಗ್ಗೆ ಫೈನಾನ್ಶಿಯಲ್ ರಿಪೋರ್ಟಿಂಗ್ ಕೌನ್ಸಿಲ್ (ಎಫ್‌ಆರ್‌ಸಿ) 2020 ಎಪ್ರಿಲ್ 15ರಂದು ತನಿಖೆಯೊಂದನ್ನು ಆರಂಭಿಸಿದೆ ಎಂದು ಎಫ್‌ಆರ್‌ಸಿ ಸೋಮವಾರ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ ಎಂದು ರಾಯ್ಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ತನ್ನ ಮಾನದಂಡಗಳನ್ನು ಅನುಸರಿಸದ ಲೆಕ್ಕಪರಿಶೋಧಕರನ್ನು ನಿಷೇಧಿಸುವ ಹಾಗೂ ಅವರಿಗೆ ದಂಡ ವಿಧಿಸುವ ಅಧಿಕಾರವನ್ನು ಎಫ್‌ಆರ್‌ಸಿ ಹೊಂದಿದೆ.
ಆ ಸಮಯದಲ್ಲಿ ಎನ್‌ಎಂಸಿ ಹೊಂದಿತ್ತು ಎನ್ನಲಾದ 2 ಬಿಲಿಯ ಡಾಲರ್ ಮೌಲ್ಯದ ಆಸ್ತಿಗಿಂತ ಹಲವು ಪಟ್ಟು ಹೆಚ್ಚು ಮೌಲ್ಯದ ಸಾಲಗಳನ್ನು ಕಂಪೆನಿ ಪಡೆದಿರುವುದನ್ನು ಪತ್ತೆಹಚ್ಚಲು ಲೆಕ್ಕಪರಿಶೋಧಕರಿಗೆ ಯಾಕೆ ಸಾಧ್ಯವಾಗಲಿಲ್ಲ ಎಂಬುದನ್ನು ತಿಳಿಯಲು ಎಫ್‌ಆರ್‌ಸಿ ಬಯಸಿದೆ.
ಲೆಕ್ಕಪರಿಶೋಧಕ ಸಂಸ್ಥೆಯೊಂದು, ಅದರಲ್ಲೂ ಇವೈಯ ಘನತೆಯ ಸಂಸ್ಥೆಯು, ಬ್ಯಾಂಕ್‌ಗಳಿಂದ ಪಡೆಯಲಾದ 4 ಬಿಲಿಯ ಡಾಲರ್‌ಗೂ ಹೆಚ್ಚಿನ ಮೌಲ್ಯದ ಸಾಲಗಳು ಹಣಕಾಸು ಹೇಳಿಕೆಯಲ್ಲಿ ನಾಪತ್ತೆಯಾಗಿರುವುದನ್ನು ಪತ್ತೆ ಹಚ್ಚಲು ಹೇಗೆ ವಿಫಲವಾಯಿತು ಎಂಬ ಪ್ರಶ್ನೆಯನ್ನು ಬ್ಯಾಂಕಿಂಗ್ ಉದ್ದಿಮೆಯ ಮೂಲಗಳು ಪದೇ ಪದೇ ಕೇಳುತ್ತಿವೆ.
ಆಂತರಿಕ ತನಿಖೆಗಳಿಗೆ ಆದೇಶ ನೀಡುವ ಮೊದಲು, ಎನ್‌ಎಮ್‌ಸಿ ಹೆಲ್ತ್‌ನ ಬ್ಯಾಂಕ್ ಸಾಲಗಳು ಕೇವಲ 2 ಬಿಲಿಯ ಡಾಲರ್ ಎಂಬುದಾಗಿ ಬಿಂಬಿಸಲಾಗಿತ್ತು.
ಎನ್‌ಎಮ್‌ಸಿ ಹೆಲ್ತ್‌ನ ಸೋದರ ಕಂಪೆನಿ ಫಿನಬ್ಲರ್‌ನ ಲೆಕ್ಕಪರಿಶೋಧಕ ಜವಾಬ್ದಾರಿಯಿಂದ ಇವೈ ಇತ್ತೀಚೆಗೆ ಹೊರಬಂದಿತ್ತು. ಯುಎಇ ಎಕ್ಸ್‌ಚೇಂಜ್ ಸೆಂಟರ್‌ನ ಮಾಲೀಕತ್ವವನ್ನು ಫಿನಬ್ಲರ್ ಹೊಂದಿದೆ.
ಆದರೆ, ಇವೈ ಈಗಲೂ ಎನ್‌ಎಮ್‌ಸಿ ಲೆಕ್ಕಪರಿಶೋಧಕ ಸ್ಥಾನದಲ್ಲೇ ಮುಂದುವರಿದಿದೆ.







