ಹೆಚ್ಚುವರಿ ನ್ಯಾಯಾಧೀಶರಾಗಿ ನ್ಯಾ. ಪದ್ಮರಾಜ ನೇಮಕ ಪ್ರಶ್ನಿಸಿದ್ದ ಅರ್ಜಿ ಪ್ರಮಾಣ ವಚನಕ್ಕೆ 15 ನಿಮಿಷಗಳಿರುವಾಗ ವಜಾ
ಹೊಸದಿಲ್ಲಿ,ಮೇ 4: ಕರ್ನಾಟಕ ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರಾಗಿ ನ್ಯಾ.ಪದ್ಮರಾಜ ಎನ್.ದೇಸಾಯಿ ಅವರ ನೇಮಕವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಸೋಮವಾರ ಅವರ ಪ್ರಮಾಣವಚನ ಸ್ವೀಕಾರಕ್ಕೆ ಕೇವಲ 15 ನಿಮಿಷಗಳು ಬಾಕಿಯಿರುವಾಗ ವಜಾಗೊಳಿಸಿದೆ.
ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಶ್ರೀ ಮಾಸ್ಟರ್ ಆರ್‌ಕೆಜಿಎಂಎಂ ಮಹಾಸ್ವಾಮೀಜಿ ಅವರು ಜ್ಯೇಷ್ಠತೆಯ ನೆಲೆಯಲ್ಲಿ ಈ ಅರ್ಜಿಯನ್ನು ಸಲ್ಲಿಸಿದ್ದು,ಸೋಮವಾರ ದೇಸಾಯಿ ಅವರಿಂದ ಪ್ರಮಾಣ ವಚನ ಸ್ವೀಕಾರಕ್ಕೆ ತಡೆಯಾಜ್ಞೆ ನೀಡುವಂತೆಯೂ ಕೋರಿದ್ದರು.
“ನೀವು ತುಂಬ ತಡವಾಗಿ ಇಲ್ಲಿಗೆ ಬಂದಿದ್ದೀರಿ. ಪ್ರಮಾಣ ವಚನ ಸ್ವೀಕಾರಕ್ಕೆ ಕೇವಲ 15 ನಿಮಿಷಗಳು ಬಾಕಿಯಿವೆ. ನೀವು ಕೋರಿರುವಂತಹ ಆದೇಶವನ್ನು ಯಾವುದೇ ನ್ಯಾಯಾಲಯವು ಈವರೆಗೆ ಹೊರಡಿಸಿಲ್ಲ” ಎಂದು ಸರ್ವೋಚ್ಚ ನ್ಯಾಯಾಲಯವು ಅರ್ಜಿದಾರರಿಗೆ ತಿಳಿಸಿತು.
ನ್ಯಾ.ದೇಸಾಯಿಯವರ ಪ್ರಮಾಣ ವಚನ ಸ್ವೀಕಾರಕ್ಕೆ ಅರ್ಧ ಗಂಟೆ ಮೊದಲು,ಅಂದರೆ ಬೆಳಗ್ಗೆ ಹತ್ತು ಗಂಟೆಗೆ ಸರ್ವೋಚ್ಚ ನ್ಯಾಯಾಲಯವು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು.
ತಾನು ಸಾಮಾನ್ಯವಾಗಿ ನ್ಯಾಯಾಧೀಶರ ನೇಮಕ ಕುರಿತು ರಾಷ್ಟ್ರಪತಿಗಳ ಆದೇಶದಲ್ಲಿ ಕೊನೆಯ ಕ್ಷಣದಲ್ಲಿ ಹಸ್ತಕ್ಷೇಪವನ್ನು ಮಾಡುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದ್ದಾಗಿ ಅರ್ಜಿದಾರರ ಪರ ವಕೀಲ ಸಂಜಯ ನೂಲಿ ಅವರು ವಿಚಾರಣೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
ನ್ಯಾ.ಮಹಾಸ್ವಾಮೀಜಿ ಅವರು 2008, ಫೆ.25ರಂದು ಪರಿಶಿಷ್ಟ ಜಾತಿಗಳಿಗೆ ಮೀಸಲಾತಿಯಡಿ ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ. ಹಿರಿಯ ಜಿಲ್ಲಾ ನ್ಯಾಯಾಧೀಶರಾಗಿರುವ ಅವರ ಜ್ಯೇಷ್ಠತೆಯನ್ನು ಕಡೆಗಣಿಸಿ ಕಿರಿಯ ನ್ಯಾಯಾಧೀಶರನ್ನು ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಳಿಸುವ ಕರ್ನಾಟಕ ಉಚ್ಚ ನ್ಯಾಯಾಲಯದ ಕೊಲಿಜಿಯಂ ಶಿಫಾರಸು ಅಕ್ರಮ, ನಿರಂಕುಶವಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು. ಎಂದೂ ಅರ್ಜಿಯಲ್ಲಿ ತಿಳಿಸಲಾಗಿತ್ತು.
ತನ್ಮಧ್ಯೆ ನ್ಯಾ.ದೇಸಾಯಿ ಹಾಗೂ ನ್ಯಾಯಮೂರ್ತಿಗಳಾದ ಶಿವಶಂಕರ ಅಮರಣ್ಣವರ್, ಮಕ್ಕಿಮನೆ ಜಿ.ಉಮಾ, ವೇದವ್ಯಾಸಾಚಾರ್ ಶ್ರೀಶಾನಂದ ಮತ್ತು ಹಂಚಟೆ ಸಂಜೀವಕುಮಾರ ಅವರು ಕರ್ನಾಟಕ ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.